Bengaluru CityKarnatakaLatestMain Post

ಇನ್ಸ್‌ಪೆಕ್ಟರ್‌ ನಂದೀಶ್ ಸಾವಿಗೆ ಪೋಸ್ಟಿಂಗ್ ಲಂಚ ಕಾರಣನಾ? – ಸಂಚಲನ ಮೂಡಿಸಿದ ಎಂಟಿಬಿ ಮಾತು

ಬೆಂಗಳೂರು: ಕರ್ತವ್ಯ ಲೋಪದ ಆರೋಪದಡಿ ಕಳೆದ ವಾರ ಸಸ್ಪೆಂಡ್ ಆಗಿದ್ದ ಕೆಆರ್‌ಪುರ ಇನ್ಸ್‌ಪೆಕ್ಟರ್‌ ನಂದೀಶ್ (Inspector Nandish) ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ನಂದೀಶ್ ಸಾವು ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಲಕ್ಷ ಲಕ್ಷ ನೀಡಿ ಎರಡು ತಿಂಗಳ ಹಿಂದೆ ಕೆಆರ್‌ಪುರಕ್ಕೆ ಪೋಸ್ಟಿಂಗ್ ಹಾಕಿಸಿಕೊಂಡಿದ್ರು. ಆದ್ರೆ ದಿಢೀರ್ ಅಮಾನತು ಕಾರಣ ಮಾನಸಿಕವಾಗಿ ಕುಗ್ಗಿ ಹೋಗಿದ್ರು. ಪೋಸ್ಟಿಂಗ್ ವಾಪಸ್ ಕೊಡಿಸಿ ಎಂದು ಹಲವರ ದುಂಬಾಲು ಬಿದ್ದಿದ್ರು ಪ್ರಯೋಜನ ಆಗಿರಲಿಲ್ಲ ಎಂಬ ಮಾತು ಹರಿದಾಡುತ್ತಿವೆ. ಇದಕ್ಕೆ ಪೂರಕ ಎಂಬಂತೆ ಸಚಿವ ಎಂಟಿಬಿ ನಾಗರಾಜ್ (MTB Nagaraj), ಪೋಸ್ಟಿಂಗ್‍ಗೆ 60-70 ಲಕ್ಷ ರೂ. ಕೊಟ್ಟು ಬಂದ್ರೆ ಹೃದಯಾಘಾತ ಆಗದೆ ಇನ್ನೇನಾಗುತ್ತೆ ಎಂದು ಹೇಳಿದ್ದಾರೆ. ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಬಿಜೆಪಿಯಲ್ಲಿರುವ ನಟಿಯರು ಐಟಂಗಳು ಹೇಳಿಕೆಗೆ ಕ್ಷಮೆಯಾಚಿಸಿದ ಕನಿಮೋಳಿ

ಕೆಆರ್‌ಪುರ ಪೊಲೀಸ್ ಇನ್ಸ್‌ಪೆಕ್ಟರ್‌ ಆಗಿದ್ದ ನಂದೀಶ್ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಇದೀಗ ಇನ್ಸ್‌ಪೆಕ್ಟರ್‌ ಸಾವಿಗೆ ಪೋಸ್ಟಿಂಗ್‍ಗಾಗಿ ಲಂಚದ ಆರೋಪ ಕೇಳಿಬಂದಿದೆ. ಅವಧಿ ಮೀರಿ ಪಬ್ ಓಪನ್ ಮಾಡಲು ಅವಕಾಶ ಕೊಟ್ಟಿದ್ದಾರೆ ಅಂತಾ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಕೇವಲ ಎರಡು ತಿಂಗಳ ಹಿಂದಷ್ಟೆ ಕೆಆರ್‌ಪುರ ಇನ್ಸ್‌ಪೆಕ್ಟರ್‌ ಆಗಿ ನಂದೀಶ್ ವರ್ಗಾವಣೆಯಾಗಿದ್ರು. ಅಮಾನತು ಶಿಕ್ಷೆಗೆ ನಂದೀಶ್ ಮಾನಸಿಕವಾಗಿ ಕುಗ್ಗಿಹೋಗಿದ್ರಂತೆ. ವಾಪಸ್ ಪೋಸ್ಟಿಂಗ್ ಕೊಡಿಸುವಂತೆ ಕೆಲ ನಾಯಕರ ಬೆನ್ನು ಬಿದ್ದಿದ್ರು ಅಂತಾ ಮಾತುಗಳು ಕೇಳಿ ಬರುತ್ತಿದೆ.

ನಿನ್ನೆ ನಂದೀಶ್‍ರ ಪಾರ್ಥಿವ ಶರೀರದ ದರ್ಶನಕ್ಕೆ ಬಂದಿದ್ದ ಸಚಿವ ಎಂಟಿಬಿ ನಾಗರಾಜ್ ಮಾತುಗಳಿಂದ, ಪೋಸ್ಟಿಂಗ್ ಉಚಿತವಾಗಿ ಸಿಗ್ತಿಲ್ಲ ಅನ್ನೋದು ದೃಢಪಟ್ಟಂತಾಗಿದೆ. ಪೋಸ್ಟಿಂಗ್‍ಗೆ 70-80 ಲಕ್ಷ ರೂ. ಕೊಟ್ಟು ಬಂದ್ರೆ ಹೃದಯಾಘಾತ ಆಗದೆ ಇನ್ನೇನಾಗುತ್ತೆ ಅನ್ನೊ ಎಂಟಿಬಿ ನಾಗರಾಜ್ ಹೇಳಿಕೆ ತೀವ್ರ ಸಂಚಲನ ಉಂಟು ಮಾಡಿದ್ದು, ಜೆಡಿಎಸ್ ನಾಯಕ ಹೆಚ್‍.ಡಿ ಕುಮಾರಸ್ವಾಮಿ (HD Kumaraswamy) ಟ್ವೀಟ್ ಮೂಲಕ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಸಿದ್ದು, ಡಿಕೆಶಿಗೆ ಖರ್ಗೆಯ ಭಯ ಶುರುವಾಗಿದೆ: ಕಟೀಲ್

ಅಮಾನತು ಶಿಕ್ಷೆಗೆ ಗುರಿಯಾಗಿ ಧಾರುಣ ಸಾವಿಗೆ ತುತ್ತಾದ ಕೆಆರ್‌ಪುರ ಠಾಣೆ ಇನ್ಸ್‌ಪೆಕ್ಟರ್‌ ನಂದೀಶ್ ಅವರ ಹೃದಯಾಘಾತಕ್ಕೆ ಕಾರಣವೇನು? ಇದು, ಇಡೀ ರಾಜ್ಯದ ಪ್ರಶ್ನೆ. ಈಗ ಸರ್ಕಾರವೇ ಸತ್ಯ ಹೇಳಿದೆ! ಸದ್ಯ, ಸರ್ಕಾರವು ಸಾವಿನಲ್ಲೂ ಸತ್ಯ ಹೇಳುವ ಧೈರ್ಯ ಮಾಡಿದೆ! ಬೊಮ್ಮಾಯಿ (Basavaraj Bommai) ಸಂಪುಟ ಸಚಿವರೇ ವಿಷಯ ಬಹಿರಂಗ ಮಾಡಿದ್ದಾರೆ. ಬಿಜೆಪಿ ಸರ್ಕಾರವು ಕರ್ನಾಟಕ ಪೊಲೀಸ್ ವ್ಯವಸ್ಥೆಯ ನೈತಿಕಸ್ಥೈರ್ಯ ಕುಗ್ಗಿಸಿದೆ. ಬಿಜೆಪಿ ಹೈಕಮಾಂಡ್ ಏಜೆಂಟ್‍ರಂತೆ ವರ್ತಿಸುತ್ತಿರುವ ಉತ್ತರ ಭಾರತದ ಕೆಲ ಹಿರಿಯ ಹಿಂದಿ ಪೊಲೀಸ್ ಅಧಿಕಾರಿಗಳು, ಕನ್ನಡ ಅಧಿಕಾರಿಗಳನ್ನು ಗುಲಾಮರಂತೆ ನೋಡುತ್ತಿದ್ದಾರೆ. ನಮ್ಮ ಕಿರಿಯ ಮಟ್ಟದ ಅಧಿಕಾರಿಗಳು ಅವರಿಗೆ ಊಳಿಗ ಮಾಡುವಂತಹ ಸ್ಥಿತಿ ಇದೆ. ಅಲ್ಲದೆ, ಸಾವಿನ ಮನೆಗೆ ಸಾಂತ್ವನ ಹೇಳಲು ಹೋದ ಸಚಿವರೇ ಸತ್ತ ಜೀವದ ಬಗ್ಗೆ ಎಗ್ಗಿಲ್ಲದೇ ನಿರ್ಲಜ್ಜವಾಗಿ ಮಾತನಾಡಿದ್ದು ಸರಿಯೋ ತಪ್ಪೋ, ಆ ತರ್ಕ ಬೇಡ. ಆದರೆ, ರಾಜ್ಯದ ಜನತೆಗೆ ಸತ್ಯ ಗೊತ್ತಾಗಬೇಕಿದೆ. ಸಂಘ ಸಂಸ್ಕಾರದ ಸರ್ಕಾರಕ್ಕೆ ಸತ್ಯ ಹೇಳದೇ ದಾರಿ ಇಲ್ಲ ಎಂದು ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button