ಕೊರೊನಾ ನಿಯಂತ್ರಣಕ್ಕೆ ಸರ್ಕಾರಕ್ಕೆ ಸಲಹೆ ಕೊಟ್ಟ ಕುಮಾರಸ್ವಾಮಿ

Public TV
1 Min Read
hdk 5

ಬೆಂಗಳೂರು: ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿ ಹರಡಿದೆ. ಇದೀಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಮೊದಲನೆಯದಾಗಿ “ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದೇ ಮುಂಜಾಗ್ರತಾ ಕ್ರಮ. ಇದಕ್ಕಾಗಿ ಕೆಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗ ತೆರೆದಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಇತರ ರೋಗಿಗಳ ಜೊತೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರಿಯೇ? ಇದರ ಬದಲು ಖಾಲಿ ಉಳಿದಿರುವ ಸರ್ಕಾರಿ ಕಟ್ಟಡಗಳನ್ನು ಇದಕ್ಕಾಗಿ ಬಳಸಿಕೊಳ್ಳಬೇಕು” ಎಂದು ಬರೆದುಕೊಂಡಿದ್ದಾರೆ. ಇದನ್ನೂ: ಅನಿವಾಸಿ ಭಾರತೀಯನ ಸಾವನ್ನು ಕೊರೊನಾ ಜೊತೆ ಲಿಂಕ್ ಮಾಡ್ಬೇಡಿ: ಉಡುಪಿ ಡಿಸಿ

ರಾಜ್ಯದಲ್ಲಿ ಹಲವು ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು ಖಾಲಿ ಉಳಿದಿವೆ. ಅವುಗಳನ್ನು ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ Quarantine ಕೇಂದ್ರಗಳಾಗಿ ಪರಿವರ್ತಿಸಬೇಕು. ಜನನಿಬಿಡ ಪ್ರದೇಶಗಳಿಂದ ದೂರದಲ್ಲಿ Quarantine ಕೇಂದ್ರ ತರೆಯಬೇಕು. ಸೋಂಕಿತರ ರಕ್ತ ಮಾದರಿ ಸಂಗ್ರಹಕ್ಕೆ ಅವರಿರುವಲ್ಲಿಯೇ ವ್ಯವಸ್ಥೆಯಾಗಬೇಕು ಎಂದರು.

ಕೊರೊನಾ ವೈರಸ್ ವಿರುದ್ಧ ಕೈಗೊಂಡ ಕ್ರಮಗಳ ಕುರಿತ ಸುದ್ದಿಯನ್ನು ಜನರಿಗೆ ತಿಳಿಸುವ ವಿಚಾರದಲ್ಲಿ ಸರ್ಕಾರದಲ್ಲಿ ಎರಡು ಧ್ರುವಗಳು ಸೃಷ್ಟಿಯಾದಂತಿವೆ. ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಒಮ್ಮತದಿಂದ ಕಾರ್ಯ ನಿರ್ವಹಿಸಲಿ. ಪರಸ್ಪರರ ನಡುವೆ ಸಹಕಾರವಿರಲಿ. ಇದು ಪ್ರಚಾರ ಪಡೆಯುವ ಪ್ರಹಸನವಾಗಬಾರದು ಎಂದು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.

“ಜನರಲ್ಲಿ ಗೊಂದಲ ಮೂಡದಿರಲಿ. ಸುರಕ್ಷತಾ ಕ್ರಮಗಳನ್ನು ವಿವರಿಸುವ ವಿಚಾರ ಪ್ರಚಾರದ ಸರಕಾಗಬಾರದು. ಹಾಗೆ ಆಗಿದ್ದೇ ಆದರೆ ಜನರಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಆತಂಕ ಸಮೂಹ ಸನ್ನಿಯಾಗಿ ಪರಿವರ್ತನೆಯಾಗಿ ಜನಜೀವನ ಮೇಲೆ ನೇತ್ಯಾತ್ಮಕ ಪರಿಣಾಮಗಳು ಉಂಟಾಗದಿರಲಿ” ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *