ಬಿಜೆಪಿ ಬಿ ಟೀಂ ಯಾರು ಅಂತ ಬಹಿರಂಗ ಚರ್ಚೆಗೆ ಸಿದ್ಧ- ಸುರ್ಜೇವಾಲಾಗೆ HDK ಸವಾಲ್

Public TV
6 Min Read
HDKumaraswamy 1

ಬೆಂಗಳೂರು : ಜೆಡಿಎಸ್ (JDS), ಬಿಜೆಪಿಯ (BJP) ಬಿ ಟೀಂ ಎಂದಿದ್ದ ಕಾಂಗ್ರೆಸ್ (Congress) ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Surjewala) ವಿರುದ್ಧ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದರು.

ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ವಿಧಾನಸೌಧ‌ ಮುಂಭಾಗದಲ್ಲಿ ಬಹಿರಂಗ ಸವಾಲ್‌ಗೆ ಸಿದ್ಧ ಅಂತ ಕಾಂಗ್ರೆಸ್ ನಾಯಕರಿಗೆ ಸವಾಲ್ ಹಾಕಿದ್ದಾರೆ.

randeep surjewala

ಟ್ವೀಟ್‌ನಲ್ಲಿ ಏನಿದೆ?:
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಅವರೇ, ಹೊಸ ಬಾಟಲಿಗೆ ಹಳೆಯ ಮದ್ಯ ತುಂಬುವ ವ್ಯರ್ಥದ ಕೆಲಸ ಏಕೆ? ರಾಜ್ಯ ಕಾಂಗ್ರೆಸ್ ಪಕ್ಷದ ಸಿದ್ದಹಸ್ತರ ಪ್ರಭಾವಕ್ಕೆ ಒಳಗಾಗಿ ಸವಕಲು ಸುಳ್ಳುಗಳನ್ನೇ ಹೇಳುವ ಕರ್ಮ ನಿಮಗೇಕೆ ಬಂತು? ನಮ್ಮ ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಮ್ ಎಂದು ಹಾಸನದಲ್ಲಿ ದೂರಿದ್ದೀರಿ. ಪಾಪ ನಿಮ್ಮನ್ನು ಪ್ರಜ್ಞಾವಂತ ರಾಜಕಾರಣಿ ಎಂದು ಭಾವಿಸಿದ್ದೆ. ನೀವು ನೋಡಿದರೆ ಸಿದ್ದಭಾಷಣವನ್ನೇ ನಕಲು ಮಾಡಿ ನಗೆಪಾಟಲಿಗೆ ಒಳಗಾಗಿದ್ದೀರಿ. ಸತ್ಯ ಅರಿತು ಮಾತನಾಡಿದ್ದರೆ ನಾನೂ ಖುಷಿ ಪಡುತ್ತಿದ್ದೆ.

ಬಿಜೆಪಿ ಬಾಲಂಗೋಚಿಯನ್ನು ಪಕ್ಕದಲ್ಲೇ ಕೂರಿಸಿಕೊಂಡು ಜೆಡಿಎಸ್ ಅನ್ನು ಬಿಜೆಪಿ ಬಿ ಟೀಮ್ ಎಂದು ದೂರಿದ್ದೀರಿ, ನಿಜಕ್ಕೂ ಆ ಬಿ ಟೀಮ್ ಯಾವುದು? ಆ ಟೀಮ್ ಕ್ಯಾಪ್ಟನ್ ಯಾರು? ಎನ್ನುವುದನ್ನು ನಿಮ್ಮ ಪಕ್ಕದಲ್ಲೇ ಇದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಕೇಳಬಾರದಿತ್ತೆ? ಅರೆಬರೆ ಆಲಾಪದಿಂದ ಅಪಹಾಸ್ಯಕ್ಕೆ ಈಡಾಗಿದ್ದಿರಿ.

ಜೆಡಿಎಸ್, ಬಿಜೆಪಿ ಬಿ ಟೀಮ್ ಎಂದು 2018ರಲ್ಲಿ ಹಾಸನದಲ್ಲಿ ರಾಹುಲ್ ಅವರಿಂದ ಹೇಳಿಸಿದ್ದ ನಿಮ್ಮ ಪಕ್ಷದ ಶಾಸಕಾಂಗ ನಾಯಕರು, 2008ರಲ್ಲಿ ಮಾಡಿದ್ದೇನು? ಈಗಿನ ಎಐಸಿಸಿ ಅಧ್ಯಕ್ಷ ಖರ್ಗೆ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಕೆಳಗಿಸಲು ಬಿಜೆಪಿಯ ಯಡಿಯೂರಪ್ಪ ಅವರ ಜತೆ ನೇರ ಡೀಲ್ ಕುದುರಿಸಿದ್ದವರ ಬಗ್ಗೆ ಗೊತ್ತಿಲ್ಲವೆ? ದಲಿತ ನಾಯಕ ಖರ್ಗೆ ಅವರನ್ನು ಸಿಎಲ್‌ಪಿ ನಾಯಕ ಸ್ಥಾನದಿಂದ ಅಪಮಾನಕರವಾಗಿ ಇಳಿಸಲು ಹಾಲಿ ಸಿಎಲ್‌ಪಿ ನಾಯಕ ಮಹಾಶಯರು ಹಣೆದ ಸಿದ್ದವ್ಯೂಹದ ಬಗ್ಗೆ ನಿಮಗೆ ಮಾಹಿತಿ ಇಲ್ಲ. ಹೋಗಲಿ ಸಿದ್ದಪೀಡಿತ ನಿಮ್ಮ ಎಐಸಿಸಿ ಅಧ್ಯಕ್ಷರನ್ನೇ ಒಮ್ಮೆ ಕೇಳಿ ತಿಳಿದುಕೊಳ್ಳಿ ಸುರ್ಜೇವಾಲ ಅವರೇ.

2008ರಲ್ಲಿ ಉಪ ಚುನಾವಣೆ ನಡೆದ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಯಡಿಯೂರಪ್ಪರಿಂದ ಕೋಟಿ ಕೋಟಿ ಥೈಲಿ ಪಡೆದದ್ದು, ಆ ಹಣವನ್ನು ಯಾರು ಪಡೆದು ಯಾರಿಗೆ ತಂದುಕೊಟ್ಟರು ಎನ್ನುವ ಕುರಿತು ಮಾಹಿತಿ ಪಡೆದುಕೊಳ್ಳಿ ಸುರ್ಜೇವಾಲರೇ. ಅನೇಕ ಸಲ ಈ ಬಗ್ಗೆ ಪ್ರಶ್ನಿಸಿದ್ದೇನೆ. ಉತ್ತರವೇ ಇಲ್ಲ. ಕೊನೆಪಕ್ಷ ನೀವಾದರೂ ಉತ್ತರಿಸಿ.

ಇಷ್ಟೆಲ್ಲಾ ಮಾತೃಪಕ್ಷ ದ್ರೋಹ ಮಾಡಿದ ನಿಮ್ಮ ಶಾಸಕಾಂಗ ಪಕ್ಷದ ನಾಯಕರ ನೇತೃತ್ವದಲ್ಲಿ 5 ವರ್ಷ ಆಡಳಿತ ನಡೆಸಿದ ನಿಮ್ಮ ಪಕ್ಷ, 2018ರಲ್ಲಿ 78 ಕ್ಷೇತ್ರಗಳಿಗೆ ಕುಸಿಯಿತೇಕೆ? ಬಿಜೆಪಿ ಜತೆ ಅವರು ನಡೆಸುತ್ತಿರುವ ಮುಂದುವರಿದ ಕಳ್ಳಾಟ ಏನೆಂದು ನಿಮಗೆ ಮಾಹಿತಿ ಇಲ್ಲವೆ? 2018ರಲ್ಲಿ ನಿಮ್ಮವರೇ ನಮ್ಮ ಮನೆಗೆ ಬಂದು ಗೊಗರೆದು ಮೈತ್ರಿ ಸರ್ಕಾರ ಮಾಡಿದರು. ಆಮೇಲೆ, ಶುರುವಾಗಿದ್ದೇ ಕುತ್ಸಿತ ರಾಜಕಾರಣ.

ಬಾಂಬೆಗೆ ಹೋದವರ ಬೆನ್ನ ಹಿಂದೆ ಇದ್ದ ಆ ನಿಗೂಢ ಬೇತಾಳ ಯಾವುದು? ನಿಮ್ಮ ಶಾಸಕಾಂಗ ಪಕ್ಷದ ನಾಯಕರು ಮಾಡಿದ್ದೇನು? ಧರ್ಮಸ್ಥಳದ ಸಿದ್ದವನ, ಕಾವೇರಿ ನಿವಾಸದಲ್ಲಿ ನನ್ನ ವಿರುದ್ಧ ಹಾಗೂ ನಿಮ್ಮ ಕೇಂದ್ರ ನಾಯಕರೇ ರಚಿಸಿದ ಮೈತ್ರಿ ಸರ್ಕಾರ ಕೆಡವಲು ಮಹೂರ್ತ ಇಟ್ಟವರು ಯಾರು? ಇಡೀ ರಾಜ್ಯವನ್ನೇ ಕೋಮುದಳ್ಳುರಿಯಲ್ಲಿ ಬೇಯುವಂತೆ ಮಾಡಿದ ಬಿಜೆಪಿ ಸರ್ಕಾರ ಬರಲು ಮೂಲ ಕಾರಣಕರ್ತರೇ ನಿಮ್ಮ ಶಾಸಕಾಂಗ ಪಕ್ಷದ ನಾಯಕರು. ಇದನ್ನೂ ಓದಿ: ಅಪ್ಪ, ಮಕ್ಕಳ ಜೊತೆ ರಾಜ್ಯ ದೋಚಲು ಈಗ ಮೊಮ್ಮಕ್ಕಳು ಶುರು ಮಾಡಿದ್ದಾರೆ : ಮಾಧುಸ್ವಾಮಿ

ಅಪರೇಷನ್ ಕಮಲವೆಂಬ ಕೆಟ್ಟ ಕೊಳಕು ರಾಜಕೀಯಕ್ಕೆ ಸಿದ್ದಪುರುಷರೂ ಇವರೇ. ಈಗ ಹೇಳಿ, ಬಿಜೆಪಿ ಬಿ ಟೀಮ್ ಯಾವ ಪಕ್ಷ? ಅದರ ಕ್ಯಾಪ್ಟನ್ ಯಾರು? ಎಂದು. ಬಿ ಟೀಮ್ ಭಾಗವತಿಕೆ ಇಲ್ಲಿಗೇ ನಿಲ್ಲಿಸಿದರೆ ಉತ್ತಮ. ಇಲ್ಲವಾದರೆ ಮುಂದಿನ ಪರಿಣಾಮಗಳಿಗೆ ನೀವೇ ಹೊಣೆ. ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಳು ದುರ್ಬಲವಾದರೆ ಆ ಪಾಪಕ್ಕೂ ನೀವೇ ಹೊಣೆ. ಬಿ ಟೀಮ್ ಯಾವ ಪಕ್ಷ ಎಂಬ ಬಹಿರಂಗ ಚರ್ಚೆಗೆ ನಾನು ಸಿದ್ಧ. ವಿಧಾನಸೌಧದ ಮುಂದೆಯೇ ಚರ್ಚೆ ನಡೆಯಲಿ. ನಿಮ್ಮ ಸಿದ್ದಪುರುಷರ ಜತೆ ನೀವೂ ಬನ್ನಿ. ಸಮಯ, ದಿನಾಂಕ ನಾನು ನಿಗದಿ ಮಾಡಲಾ? ಅಥವಾ ನೀವು ಮಾಡುತ್ತೀರಾ? ಉತ್ತರಕ್ಕೆ ಕಾಯುತ್ತಿರುತ್ತೇನೆ ಎಂದು ಕುಮಾರಸ್ವಾಮಿ ಸವಾಲ್ ಹಾಕಿದರು. ಇದನ್ನೂ ಓದಿ: ಸಿದ್ದರಾಮಯ್ಯ ಆಯ್ತು, ಇದೀಗ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಡಿಕೆಶಿಗೆ ಡಿಮ್ಯಾಂಡ್

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *