ಬೆಂಗಳೂರು: ಕುಮಾರಸ್ವಾಮಿ ಎರಡು ಬಾರಿ ಲೀಸ್ ಬೇಸ್‌ನಲ್ಲಿ ಸಿಎಂ ಆಗಿದ್ದರು ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ (Shivalinge Gowda) ಸಿದ್ದರಾಮಯ್ಯನವರನ್ನು ಸಮರ್ಥಿಸಿ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಲೀಸ್ ಬೇಸ್ ಸಿಎಂ ಎಂಬ ಕುಮಾರಸ್ವಾಮಿ (HD Kumaraswamy) ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಲೀಸ್ ಬೇಸ್ ಸಿಎಂ ಆದರೆ ಕುಮಾರಸ್ವಾಮಿ ಏನು?ಕುಮಾರಸ್ವಾಮಿ 2 ಬಾರಿ ಸಿಎಂ ಆಗಿದ್ದರು. ಅವರು ಲೀಸ್ ಬೇಸ್ ಮೇಲೆ ಆಗಿದ್ದರು ತಾನೇ. ಸುಮ್ಮನೆ ಟೀಕೆ ಮಾಡಲು ಮಾತಾನಾಡುವುದು ಬೇಡ. ಕುಮಾರಸ್ವಾಮಿ ಯಾವತ್ತು 113 ತೆಗೆದುಕೊಂಡು ಸಿಎಂ ಆಗಿಲ್ಲ. 42 ಸ್ಥಾನ ತೆಗೆದುಕೊಂಡು ಸಿಎಂ ಆದವರು. ಸಿದ್ದರಾಮಯ್ಯ ಆದರೂ 136 ಸ್ಥಾನ ಗೆದ್ದು ಸಿಎಂ ಆಗಿದ್ದಾರೆ. ಕುಮಾರಸ್ವಾಮಿ ರಾಜಕೀಯಕ್ಕೆ ಹಾಗೆ ಮಾತನಾಡುವುದು ಅವರ ಘನತೆಗೆ ಸರಿಯಲ್ಲ ಎಂದು ಕಿಡಿಕಾರಿದರು. ಇದೇ ವೇಳೆ ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಬರುವುದಾದರೆ ಸ್ವಾಗತ ಎಂದರು.
ಮಾಜಿ ಸಚಿವ ರೇವಣ್ಣ (Revanna) ನನ್ನ ಕ್ಷೇತ್ರಕ್ಕೆ ಬರುವುದಾದರೆ ಸ್ವಾಗತ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ರೇವಣ್ಣ ನನ್ನ ಕ್ಷೇತ್ರಕ್ಕೆ ಬಂದರೆ ಸ್ವಾಗತ ಎಂದರು. ಇದನ್ನೂ ಓದಿ: ನಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತು – ಶಿವಲಿಂಗೇಗೌಡಗೆ ರೇವಣ್ಣ ತಿರುಗೇಟು
ನಾನು ಸಚಿವ ಸ್ಥಾನದ ಆಕಾಂಕ್ಷಿ. ನನಗೆ ಸಚಿವ ಸ್ಥಾನ ಸಿಗಲಿದೆ ಎಂದಿದ್ದಾರೆ. ನಾನು ಯಾವಾಗ ಮಂತ್ರಿ ಆಗಬೇಕು ಎಂದು ಹಣೆಬರಹ ತೀರ್ಮಾನ ಮಾಡುತ್ತದೆ. ಹಣೆಯಲ್ಲಿ ಬರೆದಿದ್ದರೆ ಸಚಿವ ಆಗುತ್ತೇನೆ. ಇಲ್ಲ ಅಂದರೆ ಇಲ್ಲ ಎಂದರು.
ನರೇಗಾ ಅನ್ಯಾಯದ ಬಗ್ಗೆ ಹಳ್ಳಿ ಹಳ್ಳಿಯಲ್ಲಿ ಪಾದಯಾತ್ರೆ ಮಾಡುತ್ತೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಚ್ಚಿ ಹೇಳುತ್ತೇವೆ. ಗ್ರಾಮ ಸ್ವರಾಜ್ಯ ಮಾಡಲು ಮನಮೋಹನ್ ಸಿಂಗ್ ನರೇಗಾ ಜಾರಿ ಮಾಡಿದರು. ಈಗಿನ ಬಿಜೆಪಿ ಅವರು ಈ ಯೋಜನೆಗೆ ಚಪ್ಪಡಿ ಎಳೆದಿದ್ದಾರೆ. ಮೊದಲು ಅವರೇ 100% ಹಣ ಕೊಡುತ್ತಿದ್ದರು. ಈಗ 40% ಯಾಕೆ ರಾಜ್ಯ ಕೊಡಬೇಕು. ಯಾಕೆ ಹಣ ಇಲ್ಲವಾ ಕೇಂದ್ರದ ಬಳಿ ಅಂತ ಪ್ರಶ್ನೆ ಮಾಡಿದರು.
ಬಿಜೆಪಿಯಿಂದ ಬಳ್ಳಾರಿ ಪಾದಯಾತ್ರೆ ವಿಚಾರಕ್ಕೆ ಲೇವಡಿ ಮಾಡಿದ ಅವರು, ಬಳ್ಳಾರಿಯಿಂದ ಬೆಂಗಳೂರಿಗಾದರೂ ಮಾಡಲಿ, ಬೆಂಗಳೂರುನಿಂದ ಹೈದರಾಬಾದಿಗಾದರೂ ಪಾದಯಾತ್ರೆ ಮಾಡಲಿ. ಪಾದಯಾತ್ರೆ ಮಾಡಲು ಅಲ್ಲಿ ಏನು ನಡೆದಿದೆ? ಅದೊಂದು ಸಣ್ಣ ಘಟನೆ ಅದಕ್ಕೆ ಪಾದಯಾತ್ರೆ ಮಾಡಬೇಕಾ?ಇವರು ಪೋಸ್ಟರ್ ಹರಿದು ಹಾಕಿದ್ದಕ್ಕೆ ಗಲಭೆ ನಡೆದಿದೆ. ಯಾರು ಗಲಾಟೆ ಮಾಡಿದ್ದು ಎಂದು ಪ್ರಶ್ನಿಸಿ ಬಿಜೆಪಿ ವಿರುದ್ದ ಕಿಡಿಕಾರಿದರು.

