ಬೆಂಗಳೂರು: ಹೊಸ ವರ್ಷದ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರ ಕುಟುಂಬ ಸಿಂಗಾಪುರಕ್ಕೆ ಪ್ರವಾಸ ಬೆಳೆಸಿದೆ.
ಕುಮಾರಸ್ವಾಮಿ ಅವರಿಗೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಹಾಗೂ ಶಾಸಕ ಸಾ.ರಾ ಮಹೇಶ್ ಸಾಥ್ ನೀಡಿದ್ದಾರೆ. ಪ್ರತಿ ವರ್ಷದಂತೆ ಕುಮಾರಸ್ವಾಮಿ ಕುಟುಂಬ ಈ ವರ್ಷವೂ ಸಿಂಗಾಪುರಕ್ಕೆ ತೆರಳಿದ್ದು, ಹೊಸ ವರ್ಷ ಆಚರಣೆಯ ನಂತರ ಜನವರಿ 2 ಕ್ಕೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
ಇತ್ತ ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಅಯ್ಯೋ ಯಾವ ಮುಖ್ಯಮಂತ್ರಿಯೂ ಇವರ ರೀತಿ ಮಾಡಿಲ್ಲ. ಏನ್ ಕಿರೀಟ, ಕತ್ತಿ, ಗುರಾಣಿ ಹಿಡಿದುಕೊಳ್ಳುತ್ತಿದ್ದಾರೆ. ಇವರೊಬ್ಬರೇ ನವ ಕರ್ನಾಟಕ ನಿರ್ಮಾಣ ಮಾಡುವವರು. ಇಷ್ಟು ದಿನ ಎಲ್ಲಿ ಹೋಗಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವರು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ಭರದಲ್ಲಿ, ಹಿಂದಿನವರು ಸಾಧನೆ ಮಾಡಿಲ್ಲ ಎಂದು ಜರಿದಿದ್ದಾರೆ. ಈ ವೇಳೆ ನನ್ನ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಸರ್ಕಾರಿ ಹಣದಿಂದ ದುಂದುವೆಚ್ಚ ಮಾಡಿ ಪ್ರವಾಸ ಮಾಡುತ್ತಾರೆ. ನವ ಕರ್ನಾಟಕ ನಿರ್ಮಾಣ ಮಾಡುವುದಕ್ಕೆ ಇವರೊಬ್ಬರೇ ಹುಟ್ಟಿದ್ದು, ಎಲ್ಲವು ಜನರಿಗೆ ಗೊತ್ತಾಗುತ್ತದೆ. ಬಿರುಸಿನ ಮಾತು ಸ್ವಲ್ಪ ಕಡಿಮೆ ಮಾಡಬೇಕು, ಇಲ್ಲವಾದರೆ ಅದಕ್ಕೆ ಪ್ರತಿಯಾಗಿ ಬಿರುಸಿನ ಪ್ರತಿಕ್ರಿಯೆ ಕೊಡುವ ಶಕ್ತಿ ನಮಗೂ ಇದೆ ಎಂದರು.
ಕಾಂಗ್ರೆಸ್ ಭಿನ್ನಾಭಿಪ್ರಾಯ: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಒಂದು ಪ್ರವಾಸ ಮಾಡಿದರೆ, ಸಿಎಂ ಅವರು ಒಂದು ಪ್ರವಾಸ ಮಾಡುತ್ತಾರೆ. ಆದರೆ ನಮ್ಮದು ಹಾಗಲ್ಲ. ಕುಮಾರಸ್ವಾಮಿ ನಾನು ಇಬ್ಬರು ಪ್ರವಾಸ ಮಾಡುತ್ತೇವೆ. ಕಾಂಗ್ರೆಸ್ ಪ್ರವಾಸ ಸಭೆಗೆ ಎಷ್ಟು ಜನ ಸೇರಿದ್ದಾರೆ ಅಂತಾ ನೋಡಿದ್ದೇನೆ. ಅವರದ್ದು ಸರ್ಕಾರಿ ಕಾರ್ಯಕ್ರಮವೋ, ಪ್ರಚಾರ ಕಾರ್ಯಕ್ರಮವೋ ಗೊತ್ತಾಗುತ್ತಿಲ್ಲ. ಕಳೆದ ಬಾರಿ 120 ಸ್ಥಾನ ಗೆಲ್ಲಲು ಕಾರಣ ಏನು? ಎಂಬುವುದು ತಿಳಿದಿದೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನೇ ಸಿಎಂ ಎಂದು ಘೋಷಣೆ ಮಾಡಿ ರಾಹುಲ್ ಗಾಂಧಿ ಗೆದ್ದು ಬರಲಿ ನೋಡೋಣ ಎಂದು ಸಿಎಂ ವಿರುದ್ಧ ಕಿಡಿಕಾರಿದರು.
ಜನವರಿ ಬಳಿಕ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡುತ್ತಾರೆ. ಇನ್ನೊಂದು ದಿಕ್ಕಿನಲ್ಲಿ ನಾನು ಪ್ರವಾಸ ಮಾಡುತ್ತೇನೆ. ಯಡಿಯೂರಪ್ಪ, ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಅಹಂನಿಂದ ಹೇಳುತ್ತಾರೆ. ಹಾಗಾಂತ ಅವರ ಹಣೆಮೇಲೆ ಬರೆದಿದ್ದಾರಾ? ಸ್ವಲ್ಪ ದಿನ ತಡೆದುಕೊಳ್ಳಿ, ಎಲ್ಲವನ್ನು ಗಮನಿಸುತ್ತಿದ್ದೇನೆ. ತಾಳ್ಮೆ ನನಗೂ ಇದೆ. ತಾಳ್ಮೆ ಮೀರಿದಾಗ ಏನಾಗುತ್ತೆ ನೋಡೋಣ. ಬೇಲ್ ತೆಗೆದುಕೊಂಡವರೆಲ್ಲ ಸಿಎಂ ಆಗೋಕೆ ಸಾಧ್ಯ ಎಂದು ಸಿಎಂ ಪ್ರಶ್ನಿಸುತ್ತಾರೆ. ಆದರೆ ಇದೇ ಸಿದ್ದರಾಮಯ್ಯ ಅವರು ಆಪರೇಷನ್ ಕಮಲದಲ್ಲಿ ಏನು ಮಾಡಿದ್ದರು. ಯಡಿಯೂರಪ್ಪ ಸಿಎಂ ಇದ್ದಾಗ ವಿಪಕ್ಷದಲ್ಲಿ ಕುಳಿತ ಸಿದ್ದರಾಮಯ್ಯ ಏನ್ ಮಾಡಿದ್ದರು ಅಂತಾ ಪ್ರಶ್ನೆ ಮಾಡಿದರು.
ಯಾರ ಬಗ್ಗೆಯೂ ಲಘುವಾಗಿ ಮಾತನಾಡಲ್ಲ: ನಾನು ಪ್ರಧಾನಿ ಮೋದಿ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಮುಂದೆಯೂ ಮಾತನಾಡಲ್ಲ. ಹಾಗೆಯೇ ನಾನು ರಾಹುಲ್ ಗಾಂಧಿ, ಸೋನಿಯಾಗಾಂಧಿ ಯಾರ ಬಗ್ಗೆಯೂ ಲಘುವಾಗಿ ಮಾತಾನಾಡಿಲ್ಲ, ಮಾತನಾಡಲ್ಲ ಎಂದರು.
ನಮ್ಮ ಕೈಯಲ್ಲಿ ಅಧಿಕಾರ ಇಲ್ಲ. ಅದರೂ ರಾಜ್ಯದ ಎಲ್ಲಾ ಕಡೆಯೂ ಪ್ರವಾಸ ಮಾಡುತ್ತೇವೆ. ನಮಗೆ ಹೋರಾಟ ಮಾಡೋ ಕೆಚ್ಚಿದೆ. ಆದರೆ ಪರಮೇಶ್ವರ್ ಅವರಿಗೆ ಅಧಿಕಾರ ಇಲ್ಲದಿರಬಹುದು, ಕಾಂಗ್ರೆಸ್ ಸರ್ಕಾರದ ಬೆಂಬಲ, ಸಿಬಿಐ ಬೆಂಬಲವಿದೆ. ಈ ಹಿಂದೆ ಸಿದ್ದರಾಮಯ್ಯ ಅವರನ್ನ ಕರೆದುಕೊಂಡು ಹೋದ ತಕ್ಷಣ ಜೆಡಿಎಸ್ ಮುಗೀತು ಅಂದುಕೊಂಡಿದ್ದರು. ಆದರೆ ಅಮೇಲೆ ಏನಾಯಿತು ಎಂದು ಪ್ರಶ್ನಿಸಿದರು.
ಮಹದಾಯಿ ಹೋರಾಟಕ್ಕೆ ಸಿದ್ದ: ರಾಜ್ಯದ ನಾಯಕರ ಜೊತೆ ಪರಸ್ಪರ ದೋಷಾರೋಪದಿಂದ ಮಹದಾಯಿ ಏನಾಯಿತು. ನದಿಗೆ ಕಟ್ಟಿರುವ ತಡೆಗೋಡೆಯ ರಕ್ಷಣೆ ಜವಾಬ್ದಾರಿ ಕರ್ನಾಟಕ ಸರ್ಕಾರದ್ದು ಅದು ಈಗಲೂ ಹಾಗೆ ಮುಂದುವರೆಯುತ್ತೆ ಎಂದು ಭಾವಿಸಿದ್ದೇನೆ. ಅವಶ್ಯಕತೆ ಇದ್ದರೆ ಮಹದಾಯಿ ಹೋರಟಕ್ಕಾಗಿ ನಾನು ಮತ್ತೆ ಪ್ರಧಾನಿ ಅವರನ್ನ ಭೇಟಿ ಮಾಡುತ್ತೇನೆ. ಆದರೆ ಈ ವೇಳೆ ತನಗೆ ಫೋಟೋ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಇದರಲ್ಲಿ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.
https://www.youtube.com/watch?v=AGeBU4rObUc