– ಹೆಣ್ಣುಮಗಳನ್ನ ಕಿಡ್ನ್ಯಾಪ್ ಮಾಡಿ ಸೈಟು ಬರೆಸಿಕೊಂಡಿದ್ದೀರಿ
– ನಂದು, ವಿಜಯೇಂದ್ರದು ಏನಿದೆ ನಿಮ್ಮ ಬಳಿ ಬಿಚ್ಚಿ ಎಂದು ಹೆಚ್‌ಡಿಕೆ ಸವಾಲ್
ಬೆಂಗಳೂರು: ದಲಿತರಿಗೆ (Dalits) ಸೇರಬೇಕಾದ 68 ಎಕರೆ ಜಮೀನನ್ನು ಡಿಸಿಎಂ ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನ ಡಿಕೆ ಶಿವಕುಮಾರ್ ಲಪಟಾಯಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಬಾಂಬ್ ಸಿಡಿಸಿದ್ದಾರೆ.
ಪಾದಯಾತ್ರೆ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನು ಡಿಸಿಎಂ (DCM) ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನ ಡಿಕೆ ಶಿವಕುಮಾರ್ ಲಪಟಾಯಿಸಿದ್ದಾರೆ. ಅಸಲಿ ಸೊಸೈಟಿ ನಕಲಿ ಮಾಡಿ ದಲಿತರ ಭೂಮಿ ಲಪಟಾಯಿಸಿದ್ದಾರೆ. ಇವರ ಬಳಿ ನಾನು ಹೇಳಿಸಿಕೊಳ್ಳುವ ಅಗತ್ಯ ಇಲ್ಲ. ನಾನು ಸಿನಿಮಾ ವಿತರಕ ಆಗಿದ್ದಾಗ ಭೂಮಿ ಖರೀದಿಸಿದ್ದೆ. ಯಾರಿಗೂ ಮೋಸ ಮಾಡಲಿಲ್ಲ. ವಂಚನೆ ಮಾಡಿ ಭೂಮಿ ಖರೀದಿಸಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲ್ ಎಸೆದಿದ್ದಾರೆ.
ಅದೇನೋ ಬಿಚ್ತೀಯೋ ಬಿಚ್ಚು ನೋಡೋಣ:
ಹೆಣ್ಣು ಮಗಳೊಬ್ಬಳನ್ನ ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿದ್ದು ಇವರು. ಆ ಹೆಣ್ಣುಮಗಳ ಕಿಡ್ನ್ಯಾಪ್ ಮಾಡಿ ಬೆದರಿಸಿ ಅವರಪ್ಪನಿಂದ ಸದಾಶಿವನಗರದಲ್ಲಿ ಸೈಟು ಬರೆಸಿಕೊಂಡಿದ್ದೀರಿ. ಅದೇನೋ ಬಿಚ್ತೀನಿ ಅಂದ್ಯಲ್ಲಪ್ಪ, ಬಿಚ್ಚು ನೋಡೋಣ, ನಂದು, ವಿಜಯೇಂದ್ರದು ಏನಿದೆ ನಿಮ್ಮ ಬಳಿ ಬಿಚ್ಚಿ? ನಾನಿರೋದು ಬೀದಿಯಲ್ಲಿ, ನೀನಿರೋದು ಗಾಜಿನ ಮನೆಯಲ್ಲಿ ಎಂದು ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಲೇವಡಿ ಮಾಡಿದ್ದಾರೆ.
ನಾನು ಬಿಚ್ಚೋಕೆ ಹೋದ್ರೆ ನಿಮ್ಮದು ಪುಟ ಗಟ್ಟಲೆ ಇದೆ. ಅದನ್ನ ತನಿಖೆ ಮಾಡೋದಕ್ಕೆ ಹತ್ತತ್ತು ಸಿಬಿಐ, ಇಡಿ ಸಂಸ್ಥೆಗಳನ್ನ ಸ್ಥಾಪನೆ ಮಾಡ್ಬೇಕು. ಅಜ್ಜಯ್ಯನ ಬಗ್ಗೆ ಶಿವಕುಮಾರ್‌ಗೆ ಭಕ್ತಿ ಗೌರವ ಇದ್ದರೆ ಪ್ರಮಾಣ ಮಾಡಲಿ. ನೀವು ಪ್ರಾಮಾಣಿಕವಾಗಿ ಬೆಳೆದು ಬಂದ್ರಾ ಅಂತ ಪ್ರಮಾಣ ಮಾಡಲಿ. ನಾನೂ ಪ್ರಮಾಣ ಮಾಡ್ತೇನೆ. ಡಿಕೆಶಿಗೆ ಅಜ್ಜಯ್ಯನ ಶಾಪವೂ ಆರಂಭವಾಗಿದೆ. ಎಷ್ಟು ಮನೆಗಳನ್ನು ಒಡೆದು ನೀವು ಬೆಳೆದಿರಿ ಅಂತ ಗೊತ್ತಿದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯವನ್ನು ದರಿದ್ರದತ್ತ ತೆಗೆದುಕೊಂಡು ಹೋಗಿದ್ದಾರೆ:
ಈ ಪಾದಯಾತ್ರೆ ಅಸೂಯೆಯಿಂದ ಹಮ್ಮಿಕೊಂಡಿದ್ದಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಅಂಗಡಿ ಬಾಗಿಲು ತೆರೆದು ಕೂತಿದೆ. ಗ್ಯಾರಂಟಿಗಳಿಂದ ಬದಲಾವಣೆಗಳನ್ನು ತಂದಿದ್ದೇವೆ ಅನ್ಕೊಂಡಿದ್ದೇವೆ. ಆದ್ರೆ ಗ್ಯಾರಂಟಿಗಳಿಂದ ರಾಜ್ಯವನ್ನು ದರಿದ್ರದತ್ತ ತೆಗೆದುಕೊಂಡು ಹೋಗಿದ್ದಾರೆ. ಮಂತ್ರಿಗಳಲ್ಲಿ ಭ್ರಷ್ಟಾಚಾರ ನಡೆಸಲು ಪೈಪೋಟಿ ನಡೀತಿದೆ. ಬಿಜೆಪಿ ಸರ್ಕಾರದಲ್ಲಿ ಅಕ್ರಮ ನಡೆದಿದೆ ಅಂತಾರೆ, ಇವರಿಗೆ ಒಂದೇ ಒಂದು ದಾಖಲೆ ಕೊಡಲು ಆಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಿಎಂ ಪತ್ನಿ ಸೈಟು ಪಡೆಯಲು ನಮ್ಮ ವಿರೋಧವಿಲ್ಲ:
ನಮ್ಮ ಶಾಸಕರು ಇವರ ಅಕ್ರಮದ ಬಗ್ಗೆ ದಾಖಲೆಗಳ ಸಮೇತ ಮಾತಾಡಿದ್ದಾರೆ. ಮೈಸೂರು ನಗರದ ಉಸ್ತುವಾರಿಯನ್ನು ಸಿಎಂ ಅವರೇ ವಹಿಸಿಕೊಂಡಿದ್ದಾರೆ. ಸಿಎಂ ತಮ್ಮ ಪತ್ನಿ ಹೆಸರಲ್ಲಿ 14 ಸೈಟು ಪಡೆಯಲು ನಮ್ಮ ವಿರೋಧ ಇಲ್ಲ. ಆದರೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಸೈಟು ಪಡೆದಿದ್ದಾರೆ. ಇಲ್ಲಿ ನಿಂಗ, ಜವರ, ದೇವರಾಜ, ದಲಿತ ಅನ್ನೋ ಪ್ರಶ್ನೆ ಇಲ್ಲ. ನಕಲಿ ದಾಖಲೆ ಸೃಷ್ಟಿಸಿ 15 ಸೈಟುಗಳನ್ನು ತಗೊಂಡಿದ್ದಾರೆ. ಇದನ್ನು ಸಿಎಂ ಕಾನೂನು ಬಾಹಿರವಾಗಿ ತಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರು ಸರ್ಕಾರದ ಆಸ್ತಿ ಲಪಟಾಯಿಸಿದ್ದಾರೆ. ಇದರ ದಾಖಲೆ ಸದನದಲ್ಲಿ ಇಟ್ಟಿದೀವಿ. ಕಾಂಗ್ರೆಸ್ ನಾಯಕರು ಉತ್ತರ ಕೊಡದೇ ಪಲಾಯನ ಮಾಡಿದ್ದಾರೆ. ಇವರಿಗೆ ಯಾರಿಗಾದರೂ ತಾಕತ್ ಇದ್ರೆ, ಗಟ್ಟಿ ಧ್ವನಿ ಇದ್ದರೇ ಅದು ಕುಮಾರಸ್ವಾಮಿಗೆ ಅಂತ ಡಿಸಿಎಂ ಹೇಳಿದ್ದಾರೆ. ಡಿಸಿಎಂ ಅವರು ಏನು ಪ್ರಶ್ನೆ ಗಳನ್ನು ಹಾಕಿದಾರೋ ಅದಕ್ಕೆ ಉತ್ತರ ಕೊಡಲು ಇಲ್ಲಿದ್ದೇನೆ. ನನ್ನ ಬಗ್ಗೆ, ವಿಜಯೇಂದ್ರ ಬಗ್ಗೆ ಡಿಸಿಎಂ ಏಕವಚನದಲ್ಲಿ ಮಾತಾಡಿದ್ದಾರೆ. ನಾವೂ ಹಳ್ಳಿಯ ಮಕ್ಕಳೇ, ನಿಮಗಿಂತಲೂ ಹೆಚ್ಚಾಗಿ ಏಕವಚನದಲ್ಲಿ ಮಾತಾನಾಡಲು ನಮಗೂ ಗೊತ್ತು. ಆದ್ರೆ ಆ ಕೆಳಮಟ್ಟಕ್ಕೆ ನಾವು ಇಳಿಯಲ್ಲ ಎಂದು ಡಿಕೆಶಿ ವಿರುದ್ಧ ಹೆಚ್‌ಡಿಕೆ ಗುಡುಗಿದ್ದಾರೆ.
ಕೇತಗಾನಹಳ್ಳಿಯಲ್ಲಿ ನಾನು ಚಲನಚಿತ್ರ ಪ್ರದರ್ಶಕನಾಗಿದ್ದಾಗ ಚುನಾವಣೆಗೆ ನಿಲ್ಲುವ 15 ವರ್ಷಗಳ ಹಿಂದೆ 45 ಎಕರೆ ಜಮೀನು ತಗೊಂಡಿದ್ದೇನೆ. ಇದನ್ನು ನಾನು ಎಲ್ಲೂ ಮುಚ್ಚಿಟ್ಟಿಲ್ಲ ಎಂದು ತಿಳಿಸಿದ್ದಾರೆ.