-ನನ್ನ ಜೀವನದ ಕೊನೆಯ ಹೋರಾಟ 2023ರ ಚುನಾವಣೆ
ಹಾವೇರಿ: ಕರ್ನಾಟಕದ ಆಡಳಿತ ಕನ್ನಡಿಗರಿಂದಲೇ ಎಂಬ ಹೊಸ ಅಧ್ಯಾಯ ಪ್ರಾರಂಭ ಮಾಡೋಣ. ಮುಖ್ಯಮಂತ್ರಿ ಮಾಡಿ ಅಂತ ನಾನು ಕೇಳಲ್ಲ. ನಿಮ್ಮ ಬದುಕು ಸರಿಪಡಿಸಲು ಪೂರ್ಣ ಸರ್ಕಾರ ಕೊಡಿ. ಯಾರ ಹಂಗಿನಲ್ಲೂ ಇರದ ಸರ್ಕಾರ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಸರ್ವಜ್ಞ ವೃತ್ತದ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವಾರು ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡ್ತಿಲ್ಲ. ರಾಜ್ಯ ಸರ್ಕಾರದವರು ಕೇವಲ ಘೋಷಣೆ ಮಾಡುತ್ತಿದ್ದಾರೆ. ಮಳೆ ಅನಾಹುತಗಳಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಕೊಡುತ್ತೇವೆ ಎಂದು ಹೇಳಿದರು. ಒಂದು ಕಂತು ಹಣ ನೀಡಿ ಮುಂದೆ ಹಣವನ್ನೇ ನೀಡಿಲ್ಲ. ಬೆಳೆ ಹಾನಿ ಪರಿಹಾರವೂ ಸಿಕ್ಕಿಲ್ಲ. ಸಾಲಮನ್ನಾ ಆಗಿಯೇ ಇಲ್ಲ ಎಂದು ಕೆಲವು ರೈತರು ನನಗೆ ಈಗ ಮನವಿ ಕೊಟ್ಟಿದ್ದಾರೆ. ಸಾಲಮನ್ನಾ ಮಾಡಿದಾಗ ಬಿಜೆಪಿ- ಕಾಂಗ್ರೆಸ್‍ನವರು ನನ್ನನ್ನು ಅಪಹಾಸ್ಯ ಮಾಡಿದರು. ನನಗೆ ಕಳೆದ ಚುನಾವಣೆಯಲ್ಲಿ ಬಹುಮತ ಕೊಡಲೇ ಇಲ್ಲ. ನನಗೆ ಯಾರ ಜೊತೆಗೂ ಸರ್ಕಾರ ಮಾಡುವ ಮನಸ್ಸಿರಲಿಲ್ಲ. ಆದರೆ ಕಾಂಗ್ರೆಸ್‍ನವರೇ ನಮ್ಮ ಮನೆಗೆ ಬಂದರು. ಅಂದು ದೇವೆಗೌಡರು ನಮ್ಮ ಪಕ್ಷಕ್ಕೆ ಸಿಎಂ ಹುದ್ದೆ ಬೇಡವೇ ಬೇಡ ಅಂದಿದ್ದರು. ಆದರೆ ರೈತರಿಗೆ ಸಾಲಮನ್ನಾ ಮಾತು ಕೊಟ್ಟ ಹಿನ್ನೆಲೆಯಲ್ಲಿ ಸಿಎಂ ಆಗಲು ಒಪ್ಪಿಕೊಂಡೆ ಎಂದಿದ್ದಾರೆ. ಇದನ್ನೂ ಓದಿ:ಕಾಂತ್ರಿಕಾರಿ ಅಂದ್ರೆ ಗುಂಡು ಹೊಡೆಯುವುದು ಅಲ್ಲ – ಚೇತನ್‍ಗೆ ಹೆಚ್‍ಡಿಕೆ ತಿರುಗೇಟು
ಕೇಂದ್ರದ ಮುಂದೆ ನಾನೇನು ಅರ್ಜಿ ಹಿಡಿದುಕೊಂಡು ಹೋಗಲ್ಲ. ಕಮಿಷನ್ ತಿನ್ನುವುದು ಈಗ ನಡೆಯುತ್ತಿರುವುದು, ಎಲ್ಲದನ್ನೂ ಕಟ್ ಮಾಡುತ್ತೇನೆ. ಹಾವೇರಿ ಜಿಲ್ಲೆಯವರೇ ಈಗ ಸಿಎಂ ಆಗಿದ್ದಾರೆ. ಮುಂದಿನ ಎರಡು ವರ್ಷ ಏನ್ ಮಾಡುತ್ತಾರೆ ನೋಡೋಣ. ಇದು ನನ್ನ ಜೀವನದ ಕೊನೆಯ ಹೋರಾಟ 2023ರ ಚುನಾವಣೆ. ಕೋವಿಡ್ ಕಡಿಮೆ ಆದ ಮೇಲೆ ಜನರ ನಡುವೆ ಬರುತ್ತೇನೆ. ಹಿರೇಕೇರೂರು ಮಹಾನ್ ಅಭಿವೃದ್ಧಿ ಆಗಿ ಬಿಡ್ತಾ? ರಾಜೀನಾಮೆ ಕೊಟ್ಟು ನನ್ನ ಸರ್ಕಾರ ತೆಗೆದ್ರಲ್ಲಾ? ಹೊಸದಾಗಿ ಏನೂ ಅಭಿವೃದ್ದಿ ಆಗಿಲ್ಲ. ನಾನಿದ್ದಾಗ ಕೊಟ್ಟ ಅನುದಾನವೇ ಈಗಲೂ ನಡೆದಿದೆ ಎಂದು ಸಚಿವ ಬಿ.ಸಿ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
25,000 ಕೋಟಿ ಸಾಲಮನ್ನಾ ಮಾಡಿದ್ದಕ್ಕೆ ನನಗೇನು ಫಲ ಕೊಟ್ಟಿದ್ದೀರಿ? ಮುಂದೆ ಏನು ಅನಾಹುತ ಆಗುತ್ತೆ ನೋಡಿ. ಕೊರೊನಾ ಸಂದರ್ಭದಲ್ಲಿ ಶವ ಇಟ್ಟಕೊಂಡು ಜನ ಕಣ್ಣೀರು ಹಾಕುತ್ತಿದ್ದಾರೆ. ಜನತೆ ಜೊತೆ ಚೆಲ್ಲಾಟ ಆಡುವ ಸರ್ಕಾರ ತರಬೇಡಿ. ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತೀರಿ, ಆದರೆ ಪೀಸ್ ಕಟ್ಟುವುದಕ್ಕೆ ದುಡ್ಡಿಲ್ಲ. ಯೋಜನೆಗಳ ಹೆಸರಿನಲ್ಲಿ ಕಾಂಟ್ರ್ಯಾಕ್ಟರ್ ಗಳ ಬಳಿ ಕಮೀಷನ್ ತೆಗೆದುಕೊಳ್ಳುತ್ತಾರೆ. ಅದನ್ನೇ ತಂದು ನಿಮಗೆ ಹಂಚುತ್ತಾರೆ. ನಾನು 25,000 ಕೋಟಿ ಸಾಲಮನ್ನಾ ಮಾಡುವುದಕ್ಕೆ 10% ಕಮಿಷನ್ ತೆಗೆದುಕೊಂಡರೆ ಏನಾಗುತ್ತಿತ್ತು? ನಾನು ಓಟಿಗೆ 2,000, 3,000 ಹಂಚಬಹುದಿತ್ತಲ್ಲಾ? ನಿಮ್ಮ ಬದುಕು ಹಸನು ಮಾಡುವ ಸರ್ಕಾರ ಬೇಕಾ ಬೇಡವಾ? ಕೇಂದ್ರ ಸರ್ಕಾರ ನಂಬಿದರೆ ನಿಮಗೆ ಗೌರವ ಇಲ್ಲ. ಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿ ಜನ ಪ್ರಯೋಜನ ಪಡೆಯುತ್ತಿದ್ದಾರೆ. ಯುವಕರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡುತ್ತೇವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಗೆ 15 ವರ್ಷಗಳ ಸಂಭ್ರಮ- ಜೆಡಿಎಸ್ ಸಂಭ್ರಮಾಚರಣೆ
ಎಸಿ, ಡಿಸಿ ಪೋಸ್ಟಿಂಗ್ ಗೆ ಎಷ್ಟೆಷ್ಟು ಲಕ್ಷ ಕೊಟ್ಟು ಬರಬೇಕು ಅಧಿಕಾರಿಗಳು? ಇದರ ಬಗ್ಗೆ ಚರ್ಚೆ ಮಾಡುತ್ತೀರಾ ನೀವು? ಕೆಲವು ಭಾಗದಲ್ಲಿ ಕಾರ್ಯಕರ್ತರು ನಾನು ಬಂದಾಗ ಬರುತ್ತಾರೆ. ಆದರೆ ಕುಮಾರಸ್ವಾಮಿ ಹೋದ ಮೇಲೆ ಕಾರ್ಯಕರ್ತರು ಮನೇಲಿ ಮಲಗುತ್ತಾರೆ. ಈ ಬಗ್ಗೆ ಕಾರ್ಯಕರ್ತರಿಗೆ ಹೇಳಿದರೆ, ಅದನ್ನು ಅಪಹಾಸ್ಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ದೇವೇಗೌಡ್ರ ಮಾತಿನಿಂದಾಗಿ ಸಿಎಂ ಎಚ್.ಡಿ ಕುಮಾರಸ್ವಾಮಿ ಇನ್ಮುಂದೆ ಕೂಲ್ ಕೂಲ್!