– ಸಿಎಂಗೆ ಪತ್ರ ಬರೆದು ಭೂಸ್ವಾಧೀನ ನಿಲ್ಲಿಸಲು ಮಾಜಿ ಪ್ರಧಾನಿ ಒತ್ತಾಯ
ರಾಮನಗರ: ಬಿಡದಿ (Bidadi) ಹೋಬಳಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್‌ಶಿಪ್ ನಿರ್ಮಾಣ ಸಂಬಂಧ ರೈತರ ಭೂಮಿ ಸ್ವಾಧೀನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H D Devegowda) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ದೇವೇಗೌಡ ಅವರು ಪತ್ರದ ಮೂಲಕ ಭೂಸ್ವಾಧೀನ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳು:
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಡದಿ ಹೋಬಳಿಯ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಲ್ಲಿನ ಹಲವಾರು ಸರ್ವೆ ನಂಬರ್‌ಗಳಲ್ಲಿರುವ ಸುಮಾರು 10,000 ಎಕ್ರೆ ಜಮೀನನ್ನು ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟೌನ್‌ಶಿಪ್ ಯೋಜನೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: Pahalgam Terrorist Attack | ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಭರತ್ ಭೂಷಣ್ ಅಂತ್ಯಕ್ರಿಯೆ
ಜಿಲ್ಲೆಯ ರಾಮನಗರ (Ramanagara) ಮತ್ತು ಕನಕಪುರ ತಾಲೂಕಿನಲ್ಲಿ ಈಗಾಗಲೇ ರಾಜ್ಯ ಸರ್ಕಾರ ಸಾವಿರಾರು ಎಕ್ರೆ ರೈತರ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕಾಭಿವೃದ್ಧಿ ಪ್ರದೇಶವನ್ನಾಗಿ ಸ್ಥಾಪಿಸಿದೆ. ಜಿಲ್ಲೆಯು ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಂತೆ ಇದ್ದು, ಇಲ್ಲಿ ಹವವಾರು ಉದ್ಯಮಿಗಳು ಖಾಸಗಿಯಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ಕೊಲೆಯಾಗಿದ್ದ ಮಹಿಳೆ ಪತ್ತೆ ಕೇಸ್; 2 ವರ್ಷ ಜೈಲುಶಿಕ್ಷೆ ಅನುಭವಿಸಿ ನಿರಪರಾಧಿಯಾಗಿ ಬಿಡುಗಡೆಯಾದ ಸುರೇಶ್
ಉಳಿದಂತೆ ಇರುವ ಕೃಷಿ ಭೂಮಿಯಲ್ಲಿ ರೈತರು ತಮ್ಮ ಜೀವನ ನಿರ್ವಹಣೆಗೆ ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ಕೃಷಿ ಅವಲಂಬಿತರಾಗಿದ್ದಾರೆ. ಬಹುಪಾಲು ರೈತರು ಅತೀ ಸಣ್ಣ ಮತ್ತು ಸಣ್ಣ ಹಿಡುವಳಿದಾರರಾಗಿದ್ದು, ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಮತ್ತು ಸುತ್ತಮುತ್ತ ಲಕ್ಷಾಂತರ ಮರಗಿಡಗಳನ್ನು ಬೆಳೆಸಿದ್ದಾರೆ. ಇಂತಹ ಪ್ರದೇಶವನ್ನು ಟೌನ್‌ಶಿಪ್ ಯೋಜನೆಗೆ ಸ್ವಾಧೀನ ಪಡಿಸಿಕೊಂಡರೆ ಪರಿಸರಕ್ಕೆ ಅಪಾರ ಹಾನಿ ಉಂಟಾಗುತ್ತದೆ. ಇದನ್ನೂ ಓದಿ: ಪಾಕ್ ನಟನ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಬಹಿಷ್ಕಾರ
ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಗೆ ಧಕ್ಕೆ ಉಂಟಾಗಿ, ರೈತ ಕುಟುಂಬದ ಯುವಕರು ನಿರುದ್ಯೋಗಿಗಳಾಗಿ ಬೀದಿಪಾಲಾಗುತ್ತಾರೆ. ಈ ಬಡ ರೈತರ ಜೀವನೋಪಾಯಕ್ಕೆ ಕೃಷಿ ಭೂಮಿಯೇ ಆಧಾರವಾಗಿದೆ. ಇದಲ್ಲದೇ ಕರ್ನಾಟಕ ಹೌಸಿಂಗ್ ಬೋರ್ಡ್ ಹಾಗೂ ಇತರೆ ಸರ್ಕಾರಿ ಪ್ರಾಧಿಕಾರಗಳು ಬಿಡದಿಯ ಸುತ್ತಮುತ್ತಲೂ ಹಲವಾರು ವಸತಿ ಯೋಜನೆಗಳನ್ನು ರೂಪಿಸಿ, ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಇದನ್ನೂ ಓದಿ: ನೀರು ನಿಲ್ಲಿಸೋದು ಯುದ್ಧಕ್ಕೆ ಆಹ್ವಾನಿಸಿದಂತೆ – ಭಾರತದ ಪ್ರತೀಕಾರ ನಿರ್ಧಾರದಿಂದ ಕೋಪಗೊಂಡ ಪಾಕ್
ಬಡ ರೈತರ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ಟೌನ್‌ಶಿಪ್ ಯೋಜನೆಗೆ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ ಎಂದು ಹೆಚ್.ಡಿ.ದೇವೇಗೌಡ ಅವರು ಪತ್ರದ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.