ಮಂಗಳೂರು: ಚುನಾವಣಾ ಫಲಿತಾಂಶ ಬಂದ ಬಳಿಕ ಯಾರೊಂದಿಗೂ ಮೈತ್ರಿ ಇಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಮೈತ್ರಿ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಕ್ಷಣದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಲೋಪವನ್ನು ಹಿಡಿದುಕೊಂಡು ಪಕ್ಷ ಕಟ್ಟುವ ಅಗತ್ಯ ಇಲ್ಲ. ನಮ್ಮ ಸಿದ್ಧಾಂತಗಳನ್ನು ಹಿಡಿದುಕೊಂಡು ಪಕ್ಷ ಕಟ್ಟುತ್ತೇವೆ. ಕುಮಾರಸ್ವಾಮಿ ನನ್ನ ಬಿಟ್ಟು ಬಿಜೆಪಿ ಜೊತೆ ಹೋಗಿ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಅಂತ ಹೇಳಿದ್ರು.
ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದೇನೆ. ಮೋದಿ ಬಹಳ ಬುದ್ಧಿವಂತರಿದ್ದಾರೆ. ಅವರು ಯಾವುದನ್ನೂ ಮಾತನಾಡಲ್ಲ. ಕೇವಲ ಕಾಫಿ-ಟೀ ಕೊಟ್ಟು ಸುಮ್ನಿರ್ತಾರೆ. ಅವರು ವಿವಾದಗಳ ಬಗ್ಗೆ ಮಾತನಾಡಲ್ಲ. ಮೋದಿ ಬಗ್ಗೆ ದೇವೇಗೌಡರು ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎಂಬ ಆರೋಪ ಇದೆ. ಆದರೆ ನಾನು ಮನಸ್ಸಿಗೆ ತೋಚಿದಂತೆ ಮಾತನಾಡಲ್ಲ. ಮೋದಿಯವರ ಹುದ್ದೆ ಬಗ್ಗೆ ನನಗೆ ಗೌರವ ಇದೆ ಎಂದರು.
ಅತಂತ್ರ ಪರಿಸ್ಥಿತಿ ಬಂದ್ರೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಲ್ಲ. ನನಗೆ ಎಲೆಕ್ಷನ್ ಗೆ ಹೋಗಲು ದುಡ್ಡಿರಲಿಲ್ಲ. 2004ರಲ್ಲಿ ತುಂಬಾ ಸಮಸ್ಯೆಗಳಿದ್ದವು. ಆದರೆ 58 ಸ್ಥಾನಗಳನ್ನು ಗೆದ್ದಿದ್ದೆವು. ಫೆಬ್ರವರಿ ಮೂರನೇ ವಾರದೊಳಗೆ 224 ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡ್ತೇನೆ. ಯಾರ ಮೇಲೂ ಸೇಡಿನ ರಾಜಕೀಯ ಮಾಡಲು ಹೋಗೋದಿಲ್ಲ ಎಂದು ಹೇಳಿದ್ರು. ಜೆಡಿಎಸ್ ಶಾಸಕರ ಪಕ್ಷಾಂತರ ವಿಚಾರವಾಗಿ ಮಾತನಾಡಿ, ನಮ್ಮ ತಾಳ್ಮೆಗೂ ಮಿತಿ ಇದೆ. ಹಾಗಾಗಿ ಪಕ್ಷದಿಂದ ಉಚ್ಛಾಟನೆ ಮಾಡಿದ್ದೇವೆ ಅಂದ್ರು.
ಶಾಂತಿಯುತವಾಗಿ ಮಂಗಳೂರಿನಲ್ಲಿ ಯಾತ್ರೆ ನಡೆಸಲು ತೀರ್ಮಾನಿಸಿದ್ದೆ. ಆದರೆ ಅವಕಾಶ ನಿರಾಕರಿಸಿದ್ದು ಆಶ್ಚರ್ಯವಾಗಿತ್ತು. ಮೂರು ಜಿಲ್ಲೆಯಲ್ಲಿ ನಮ್ಮ ಪಕ್ಷ ಅಷ್ಟೊಂದು ಪ್ರಬಲವಾಗಿಲ್ಲ. ಪಕ್ಷ ಸಂಘಟನೆಗೆ ಪ್ರಯತ್ನ ಮಾಡುತ್ತಿದ್ದೇನೆ. ಫೆಬ್ರವರಿ ಎರಡನೇ ವಾರದಲ್ಲಿ ಮಂಗಳೂರಿನಲ್ಲಿ ದೊಡ್ಡ ಸಮಾವೇಶ ನಡೆಸುತ್ತೇನೆ. ಪಕ್ಷದ ಚುನಾವಣಾ ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡ್ತೇನೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೂರು ಸ್ಥಾನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಗೆದ್ದಿದ್ದೆವು. ಕೆಲವು ಜಿಲ್ಲೆಯಲ್ಲಿ ನಮ್ಮ ಶಕ್ತಿ ಇದೆ, ಕೆಲವು ಜಿಲ್ಲೆಯಲ್ಲಿ ಇಲ್ಲ. ಆದರೆ 224 ಕ್ಷೇತ್ರಗಳಲ್ಲೂ ಅಭ್ಯರ್ಥಿ ಗಳನ್ನು ನಿಲ್ಲಿಸುತ್ತೇವೆ. ಕೆಲವು ಸ್ಥಾನಗಳನ್ನು ಕಮ್ಯುನಿಸ್ಟ್ ಪಾರ್ಟಿಗೆ ಬಿಟ್ಟುಕೊಡಲು ಯೋಚಿಸಿದ್ದೇವೆ ಎಂದು ಹೇಳಿದ್ರು.