ದೋಸ್ತಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ – ಬಹಿರಂಗವಾಗಿಯೇ ಎಚ್‍ಡಿಡಿ ಕಿಡಿ

Public TV
2 Min Read
H.D.Deve gowda Siddaramaiah

– ಆಂಗ್ಲ ಮಾಧ್ಯಮಕ್ಕೆ ಮಾಜಿ ಪ್ರಧಾನಿ ಸಂದರ್ಶನ
– ಜೆಡಿಎಸ್ ಮುಗಿಸಲು ಬಿಜೆಪಿಗೆ ಸಹಕಾರ
– ಬಿಎಸ್‍ವೈ – ಸಿದ್ದು ಗುಟ್ಟಾಗಿ ಕೆಲಸ ಮಾಡಿದ್ದಾರೆ

ಬೆಂಗಳೂರು: ಇಲ್ಲಿಯವರೆಗೆ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತುತ್ತಿದ್ದ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಈಗ ನೇರಾನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ದೋಸ್ತಿ ಸರ್ಕಾರ ಪತನ ಹೊಂದಲು ಸಿದ್ದರಾಮಯ್ಯ ಅವರೇ ಕಾರಣ. ಸಿದ್ದರಾಮಯ್ಯನವರಿಂದಾಗಿ ತುಮಕೂರಿನಲ್ಲಿ ನಾನು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುವಂತಾಯಿತು ಎಂದು ದೇವೇಗೌಡರು ಹೇಳಿದ್ದಾರೆ.

congress jds

ದೇವೇಗೌಡರು ಹೇಳಿದ್ದು ಏನು?
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ಕಾಂಗ್ರೆಸ್‍ನ ಉದ್ದೇಶವಾಗಿತ್ತು. ಆದರೆ, ಹೈಕಮಾಂಡ್ ಮೈತ್ರಿ ನಿರ್ಧಾರಕ್ಕೆ ಸಿದ್ದರಾಮಯ್ಯ ಒಪ್ಪಿಗೆ ಇರಲಿಲ್ಲ. ನನ್ನ ಮತ್ತು ಕುಮಾರಸ್ವಾಮಿ ಜೊತೆಗೆ ಬಗೆಹರಿಯದ ಕದನ ಸಿದ್ದರಾಮಯ್ಯಗಿತ್ತು. ಅಷ್ಟೇ ಅಲ್ಲದೇ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯ ಸ್ಥಾನದಲ್ಲಿ ನೋಡಲು ಸಿದ್ದರಾಮಯ್ಯನವರಿಗೆ ಆಗ್ತಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‍ನಿಂದಾದ ಸೋಲಿನಿಂದ ಕಂಗೆಟ್ಟಿದ್ದ ಸಿದ್ದರಾಮಯ್ಯನನವರಿಗೆ ಅಸಾಧ್ಯ ಸಿಟ್ಟು ತರಿಸಿತ್ತು.

ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ನಮ್ಮ ವಿರುದ್ಧ ಬಹಿರಂಗವಾಗಿ ಕೆಲಸ ಮಾಡಿದ್ದರಿಂದ ತುಮಕೂರಿನಲ್ಲಿ ನಾನು ಮತ್ತು ಮಂಡ್ಯದಲ್ಲಿ ನಿಖಿಲ್ ಸೋಲಲು ಕಾರಣವಾಯಿತು. ನಮ್ಮ ವಿರುದ್ಧ ಕೆಲಸ ಮಾಡಿದ ಕಾಂಗ್ರೆಸ್ಸಿನವರಿಗೆ ಅವರು ನೋಟಿಸ್ ನೀಡಲಿಲ್ಲ. ಸದ್ಯಕ್ಕೆ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ವಿರುದ್ಧ ಹೋರಾಡಲು ಯಾರೂ ಇಲ್ಲ.

Congress JDS 6

 

ಯಡಿಯೂರಪ್ಪ ಸಿಎಂ ಆಗಬೇಕು ಎನ್ನುವುದು ಸಿದ್ದರಾಮಯ್ಯ ಗುರಿಯಾಗಿತ್ತು. ವಿರೋಧ ಪಕ್ಷದ ನಾಯಕರಾಗಲು ಸಿದ್ದರಾಮಯ್ಯ ಮನಸ್ಸು ಮಾಡಿದ್ದರು. ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಹಿಂದೆ ಒಟ್ಟಾಗಿ-ಗುಟ್ಟಾಗಿ ಕೆಲಸ ಮಾಡಿದ್ದಾರೆ. ಬಳ್ಳಾರಿಗೆ ಪಾದಯಾತ್ರೆ ಬಿಟ್ಟರೆ, ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಮಾಡಿದ್ದೇನು? ಬಿಎಸ್‍ವೈ ಸರ್ಕಾರದ ವಿರುದ್ಧ ನಿಜವಾಗಿ ಹೋರಾಡಿದ್ದು ಹೆಚ್‍ಡಿಕೆ ಹೊರತು ಸಿದ್ದರಾಮಯ್ಯ ಅಲ್ಲ.

ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಅವರನ್ನು ಮಂಡ್ಯದಲ್ಲಿ ಸಿದ್ದರಾಮಯ್ಯ ಬೆಂಬಲಿಸಿದರು. ಹಾಸನ, ಮಂಡ್ಯದಲ್ಲಿ ಬಿಜೆಪಿ ಪ್ರವೇಶದ ಆತಂಕ ಎದುರಾಗಿದ್ರೆ ಅದಕ್ಕೆ ಸಿದ್ದರಾಮಯ್ಯ ಕಾರಣ. ಸ್ಥಳೀಯ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಂದ ಬಿಜೆಪಿ 14 ಕಡೆ ಗೆದ್ದುಕೊಂಡಿದೆ. ನಮ್ಮನ್ನು ರಾಜಕೀಯವಾಗಿ ನಾಶ ಪಡಿಸಬೇಕು ಅಂತಾ ಸಿದ್ದರಾಮಯ್ಯ ಪ್ರಯತ್ನಪಟ್ಟ ಫಲವಾಗಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 79ಕ್ಕೆ ಕುಸಿಯಿತು. ಶಾದಿ ಭಾಗ್ಯ, ಅಹಿಂದಾ ಎಲ್ಲ ಏನಾಯ್ತು? ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ನಮ್ಮನ್ನ ಬಿಜೆಪಿಯ ಬಿ ಟೀಂ ಎಂದು ಕರೆಯಲು ಸಿದ್ದರಾಮಯ್ಯನೇ ಕಾರಣ.

JDS CONGRESS LEADERS 1

ಮೈತ್ರಿ ಸರ್ಕಾರ ರಚನೆಯಾದಾಗ ನನ್ನನ್ನು ನಂಬಿ, ಹಳೆಯದನ್ನು ಮರೆತುಬಿಡಿ ಎಂದು ಸಿದ್ದರಾಮಯ್ಯ ಬಳಿ ಕೇಳಿಕೊಂಡಿದ್ದೆ. ಒಟ್ಟಾಗಿ ರಾಜ್ಯ ಪ್ರವಾಸ ಮಾಡಲು ಎರಡು ಬಾರಿ ಮನವಿ ಮಾಡಿದೆ. ಆದರೆ ಸಿದ್ದರಾಮಯ್ಯಗೆ ಹಳೆಯದನ್ನ ಮರೆಯಲು ಆಗಲೇ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯಗೆ ತಮ್ಮ ಬಲ ತೋರಿಸಬೇಕಿತ್ತು. ಹೀಗಾಗಿ ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣರಾದರು.

ಉಪಚುನಾವಣೆಯ ಸಮಯದಲ್ಲಿ ಮತ್ತೆ ಎರಡು ಪಕ್ಷಗಳು ಮೈತ್ರಿ ಮಾಡಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೀರಾ ಎನ್ನುವ ಪ್ರಶ್ನೆಗೆ, ಈ ಬಗ್ಗೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ. ಒಂದು ವೇಳೆ ಸೋತರೆ ಸಿದ್ದರಾಮಯ್ಯ ದೇವೇಗೌಡರ ಜೊತೆ ಹೋಗಿದ್ದರಿಂದ ನಾವು ಸೋತೆವು ಎಂದು ಹೇಳಬಹುದು. ಸ್ಥಳೀಯ ನಾಯಕರು ಯಾರೂ ಈ ಬಗ್ಗೆ ಮಾತುಕತೆ ನಡೆಸಲು ಸಿದ್ಧರಿಲ್ಲ. ಒಂದು ವೇಳೇ ಸೋನಿಯಾ ಗಾಂಧಿ ಉಪಚುನಾವಣೆಯ ಸಂದರ್ಭದಲ್ಲಿ ಮಾತನಾಡಿದರೆ ಅದು ಬೇರೆ ವಿಚಾರ ಎಂದು ಉತ್ತರಿಸಿದರು.

JDS CONGRESS

Share This Article
Leave a Comment

Leave a Reply

Your email address will not be published. Required fields are marked *