Connect with us

Bellary

ಬಳ್ಳಾರಿ ಗಣಿ ಉದ್ಯಮಿಗೆ ಗೌಡರ ಗಾಳ – ಕಾಂಗ್ರೆಸ್ ಬಿಟ್ಟು ಜೆಡಿಎಸ್‍ಗೆ ಸೇರಲು ಇಕ್ಬಾಲ್ ಗೆ ಆಹ್ವಾನ

Published

on

ಬಳ್ಳಾರಿ: ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ಮಾಜಿ ಪ್ರಧಾನಿ ದೇವೇಗೌಡ್ರು ತೆನೆ ಹೊರಿಸ್ತಾರಾ? ಇತಂಹದ್ದೊಂದು ರಾಜಕೀಯ ಕ್ಷಿಪ್ರ ಬೆಳವಣಿಗೆ ಇಂದು ನಡೆದಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಪೈಪೋಟಿ ನಡೆಸಿದ್ದ ಗಣಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹೊತ್ತೂರ್ ಮನೆಗೆ ಮಾಜಿ ಪ್ರಧಾನಿ ದೇವೇಗೌಡರು ಇಂದು ದಿಢೀರ್ ಭೇಟಿ ನೀಡಿದ್ರು. ಈ ವೇಳೆ ರಾಜಕೀಯ ಚರ್ಚೆ ನಡೆಸಿ ಹೊತ್ತೂರ್ ಮನೆಯಲ್ಲಿ ಉಪಹಾರ ಸೇವನೆ ಮಾಡಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಬಳ್ಳಾರಿಯಲ್ಲಿಂದು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಜೆಡಿಎಸ್ ವರಿಷ್ಠ ದೇವೇಗೌಡ್ರು, ಮುಂಜಾನೆ ಕನಕ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಇಕ್ಬಾಲ್ ಹೊತ್ತೂರ್ ಮನೆಗೆ ದಿಢೀರ್ ಭೇಟಿ ನೀಡಿ ರಾಜಕೀಯ ಚರ್ಚೆ ನಡೆಸಿದರು. ಇದೇ ವೇಳೆ ಹೊತ್ತೂರ್ ಅವರನ್ನ ಪಕ್ಷಕ್ಕೆ ಆಹ್ವಾನ ಮಾಡಿದ್ರು. ದೇವೇಗೌಡರ ಆಹ್ವಾನವನ್ನು ಸ್ವೀಕರಿಸಿರುವ ಹೊತ್ತೂರ್, ಡಿಸೆಂಬರ್ ಅಂತ್ಯದ ವೇಳೆಗೆ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಸಮಾರಂಭದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎನ್ನಲಾಗ್ತಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಇಕ್ಬಾಲ್ ಹೊತ್ತೂರ್ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾಗಿದ್ದ ವೇಳೆ ಕಾಂಗ್ರೆಸ್ ಪಕ್ಷ ಅವರ ಸಹೋದರ ಅಬ್ದುಲ್ ವಹಾಬ್ ರನ್ನು ಹೊಸಪೇಟೆಯಿಂದ ಕಣಕ್ಕೆ ಇಳಿಸಿ ಪರಾಭವಗೊಂಡಿದ್ದರು. ಹೀಗಾಗಿ ಈ ಬಾರಿ ಇಕ್ಬಾಲ್ ಹೊತ್ತೂರ್ ಅವರನ್ನು ಬಳ್ಳಾರಿ ನಗರ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಜೆಡಿಎಸ್ ಮುಂದಾಗಿದೆ. ಅಲ್ಲದೇ ಬಳ್ಳಾರಿ ಜಿಲ್ಲೆಯ ಎಲ್ಲಾ 9 ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ದೇವೇಗೌಡ್ರು ರಣತಂತ್ರ ರೂಪಿಸಿರುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ.

ಈ ಬಗ್ಗೆ ಇಕ್ಬಾಲ್ ಹೊತ್ತೂರ್ ಪ್ರತಿಕ್ರಿಯೆ ನೀಡಿದ್ದು, ದೇವೇಗೌಡ್ರು ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಸ್ನೇಹಿತರು, ಸಮಾಜದ ಮುಖಂಡರ ಜೊತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *