ಹಾಸನ: ಕಳೆದ ಒಂದು ವಾರದಿಂದಲೂ ನಡೆಯುತ್ತಿರುವ ಮಹಾಮಸ್ತಕಾಭಿಷೇಕಕ್ಕೆ ಇನ್ನೆರಡು ದಿನಗಳು ಬಾಕಿ ಇರುವಂತೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಇಂದು ಯಶಸ್ವಿಯಾಗಿ ವಿಂಧ್ಯಗಿರಿ ಏರಿ ಬಾಹುಬಲಿ ದರ್ಶನ ಪಡೆದಿದ್ದಾರೆ.
85ನೇ ವಯಸ್ಸಿನಲ್ಲೂ ದೇವೇಗೌಡರ ಮನೋಶಕ್ತಿಗೆ ನೆರೆದಿದ್ದ ಜನರು ಅಚ್ಚರಿ ವ್ಯಕ್ತಪಡಿಸಿದ್ದು, ಅವರು ಬರಿಗಾಲಲ್ಲೇ ವಿಂಧ್ಯಗಿರಿ ಹತ್ತುವ ದೃಶ್ಯಗಳನ್ನು ಸೆರೆಹಿಡಿಯಲು ನೆರೆದಿದ್ದ ಜನರು ಮುಗಿಬಿದ್ದರು. ಈ ವೇಳೆ ಎಚ್‍ಡಿಡಿ ಅವರ ಪತ್ನಿ ಚೆನ್ನಮ್ಮ ಸಹ ದೇವೇಗೌಡರಿಗೆ ಕೆಲಕಾಲ ಸಾತ್ ನೀಡಿದರು. ಆನಂತರ ಅವರನ್ನು ಡೋಲಿ ಸಹಾಯದಿಂದ ಕರೆದುಕೊಂಡು ಹೋಗಲಾಯಿತು.
ಸುಡು ಬಿಸಿಲನ್ನು ಲೆಕ್ಕಿಸದೆ ಬೆಟ್ಟ ಹತ್ತಿದ್ದ ಎಚ್‍ಡಿಡಿ, ಬಾಹುಬಲಿ ಗೆ ನೆರವೇರುತ್ತಿದ್ದ ಪಂಚಾಮೃತ ಅಭಿಷೇಕವನ್ನ ಕಣ್ತುಂಬಿಕೊಂಡರು. ಮಹಾಮಸ್ತಕಾಭಿಷೇಕ ಆರಂಭ ದಿನವಾದ ಫೆಬ್ರವರಿ 17 ರಂದು ಸಿಎಂ ಸಿದ್ದರಾಮಯ್ಯ ಅವರು ಡೋಲಿ ಬಳಸದೆ ಮೆಟ್ಟಿಲು ಹತ್ತಿ ದರ್ಶನ ಪಡೆದಿದ್ದರು. ನಾಳೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಶ್ರವಣಬೆಳಗೊಳಕ್ಕೆ ಆಗಮಿಸುತ್ತಿದ್ದು, ಬಾಹುಬಲಿ ದರ್ಶನ ಪಡೆಯಲಿದ್ದಾರೆ. ಫೆ.26 ರಂದು 88 ನೇ ಮಹಾ ಮಸ್ತಕಾಭಿಷೇಕದ ಸಮಾರೋಪ ಸಮಾರಂಭ ನಡೆಯಲಿದೆ.
ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬಾಹುಬಲಿಯ ಮೂರ್ತಿ ತ್ಯಾಗದ ಸಂಕೇತವಾಗಿದ್ದು ಇಡೀ ಜಗತ್ತಿಗೆ ಮಾದರಿಯಾಗಿದೆ. ಸರ್ವಸ್ವವನ್ನೂ ತ್ಯಾಗ ಮಾಡಿದ ಸಂತರು ಇಲ್ಲಿಗೆ ಬಂದಿದ್ದಾರೆ. ಅವರ ಜೀವನವೇ ಅತ್ಯಂತ ಕಷ್ಟಕರ, ಅದನ್ನ ನೋಡುವುದು ನಮಗೆ ಪುಣ್ಯ. ಅಧಿಕಾರಕ್ಕಾಗಿ ಹಪಹಪಿಸುವವರು ಬಾಹುಬಲಿ ಜೀವನ ಅರಿಯಬೇಕು. ನಾನು ಐವತ್ತು ವರ್ಷಗಳಿಂದ ಮಹಾಮಸ್ತಕಾಭಿಷೇಕ ನೋಡಿದ್ದು, ಐದು ಬಾರಿ ಮಹಾಮಜ್ಜನ ನೋಡಿದ್ದೇನೆ. ಕ್ಷೇತ್ರದ ಚಾರೂಕೀರ್ತಿ ಭಟ್ಟಾರಕ ಸ್ವಾಮಿಜಿ ಕ್ಷೇತ್ರಕ್ಕೆ ಸಾಕಷ್ಟು ಪುಣ್ಯದ ಕೆಲಸ ಮಾಡಿದ್ದಾರೆ. ನಾವು ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿದ್ದಾಗ ಸಾಕಷ್ಟು ಸಹಾಯ ಮಾಡಿದ್ದೇವೆ. ಈ ಕ್ಷೇತ್ರದ ಅಭಿವೃದ್ಧಿಗೆ ಇಲ್ಲಿನ ಸಂತರ ಕೊಡುಗೆ ಅಪಾರ. ಲಕ್ಷಾಂತರ ಜನ ಭಕ್ತರಿದ್ದಾರೆ, ಇದು ಅದ್ಭುತವಾದ ಕಾರ್ಯ. ಮಹಾಮಸ್ತಕಾಭಿಷೇಕದಲ್ಲಿ ಭಾಗಿಯಾದ ಬಗ್ಗೆ ಹರ್ಷವಾಗಿದೆ ಎಂದು ಹೇಳಿದರು.
https://www.youtube.com/watch?v=QTotz43oSDo