ಪ್ರಧಾನಿ ಹುದ್ದೆಗೆ ಚಂದ್ರಬಾಬು ನಾಯ್ಡು ಹೆಸರು ತೇಲಿಬಿಟ್ಟ ಎಚ್‍ಡಿಡಿ

Public TV
2 Min Read
HDD Chandrababu Naidu

– ಎಲ್ಲ ವಿಪಕ್ಷಗಳನ್ನು ನಾಯ್ಡು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ
– ನಾನು ಪ್ರಧಾನಿ ಸ್ಥಾನದ ಆಕಾಂಕ್ಷಿಯಲ್ಲ: ನಾಯ್ಡು

ಅಮರಾವತಿ: ಮಹಾಘಟಬಂಧನ್ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಈ ಮಧ್ಯೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ತೇಲಿಬಿಟ್ಟಿದ್ದಾರೆ.

ಆಂಧ್ರ ಪ್ರದೇಶದ ತಿರುವೂರಿನಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಮಾತನಾಡಿದ ಅವರು, ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಸನ್ನಿವೇಶದಲ್ಲಿ ಮಹತ್ವದ ಜವಾಬ್ದಾರಿ ಹೊರಲು ಒಪ್ಪಿಕೊಂಡಿದ್ದಾರೆ. ಅವರು ಯಾಕೆ ದೇಶದ ಪ್ರಧಾನಿಯಾಗಬಾರದು ಎಂದು ಪ್ರಶ್ನಿಸಿದ್ದಾರೆ.

chandrababu naidu and modi

ಇದೇ ವೇಳೆ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಚಂದ್ರಬಾಬು ನಾಯ್ಡು ಅವರು, ನಾನು ಪ್ರಧಾನಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟನೆ ನೀಡಿದರು.

ಎಚ್.ಡಿ.ದೇವೇಗೌಡ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಒಡ್ಡುವ ಬಲಿಷ್ಠ ನಾಯಕ ಯಾರು ಎನ್ನುವುದೇ ಪ್ರಶ್ನೆಯಾಗಿದೆ. ಮಾಧ್ಯಮಗಳಲ್ಲಿ ಇದೇ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಹೀಗಾಗಿ ಮೋದಿ ಅವರಿಗೆ ಪ್ರಬಲ ಪ್ರತಿಸ್ಪರ್ಧೆ ನೀಡಲು ಚಂದ್ರಬಾಬು ನಾಯ್ಡು ಸಮರ್ಥ ನಾಯಕರಾಗಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿ ಪ್ರಜಾಪ್ರಭುತ್ವವನ್ನು ನಾಶ ಮಡಲು ಯತ್ನಿಸುತ್ತಿದ್ದಾರೆ. ಆದರೆ ಚಂದ್ರಬಾಬು ನಾಯ್ಡು ಅವರು ಪ್ರಜಾಸತ್ತಾತ್ಮಕ ರೀತಿಯಲ್ಲಿ ಮೋದಿ ಅವರನ್ನು ಎದುರಿಸಲು ಮುಂದಾಗಿದ್ದಾರೆ. ಇದರಿಂದಾಗಿ ಚಂದ್ರಬಾಬು ನಾಯ್ಡು ಪ್ರಧಾನಿಯಾಗಲು ಸಮರ್ಥರು ಎಂದು ತಿಳಿಸಿದರು.

chandrababu naidu HDD HDK

ಪ್ರಾದೇಶಿಕ ಪಕ್ಷಗಳು ಸ್ವಾರ್ಥ- ಸ್ವಹಿತಾಸಕ್ತಿ ಹೊಂದಿದ್ದು, ಒಗ್ಗೂಡುವುದು ಸುಲಭವಲ್ಲ ಎಂದು ಬಿಜೆಪಿಯವರು ದೂರುತ್ತಿದ್ದಾರೆ. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 23 ಪಕ್ಷಗಳನ್ನು ಸೇರಿಸಿ ಎನ್‍ಡಿಎ ಮೈತ್ರಿಕೂಟ ಮುನ್ನಡೆಸಿದ್ದರು. ಆ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧವನ್ನೂ ವಾಜಪೇಯಿ ಗೆದ್ದರು. ಆದರೆ ಪ್ರಧಾನಿ ಮೋದಿ ಪ್ರಾದೇಶಿಕ ಪಕ್ಷಗಳ ಒಕ್ಕೂಟದ ಬಗ್ಗೆ ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂದು ದೂರಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನನ್ನು ಸೋಲಿಸಲು ಚಂದ್ರಬಾಬು ನಾಯ್ಡು ಅವರು ಅನೇಕ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದರು. ಈ ನಿಟ್ಟಿನಲ್ಲಿ ಮಹಾಘಟಬಂಧನ್ ರೂಪಿಸಲಾಗಿತ್ತು. ಆದರೆ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದನ್ನು ನಾಯಕರು ಸ್ಪಷ್ಟಪಡಿಸಿಲ್ಲ. ಬಿಎಸ್‍ಪಿ ನಾಯಕಿ ಮಯಾವತಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರುಗಳು ಪ್ರಧಾನಿ ರೇಸ್‍ನಲ್ಲಿ ಕೇಳಿ ಬರುತ್ತಿವೆ.

vote 6

ಆಂಧ್ರ ಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಸ್ಥಾನಗಳಿದ್ದು, ಒಂದೇ ಹಂತದಲ್ಲಿ ಏಪ್ರಿಲ್ 11ರಂದು ಮತದಾನ ನಡೆಯಲಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರ ವೈಎಸ್‍ಆರ್ ಪಕ್ಷವು 8 ಹಾಗೂ ಬಿಜೆಪಿ 2 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು.

Share This Article
Leave a Comment

Leave a Reply

Your email address will not be published. Required fields are marked *