ಬೆಂಗಳೂರು : ಸೊರಗಿರೋ ಪಕ್ಷಕ್ಕೆ ಹೊಸ ಚೈತನ್ಯ ತುಂಬಲು ಜೆಡಿಎಸ್ ವರಿಷ್ಠ ದೇವೇಗೌಡ ಹೊಸ ರಣತಂತ್ರ ರೂಪಿದ್ದಾರೆ. ಶತಾಯಗತಾಯ 2023 ರಲ್ಲಿ ಪಕ್ಷ ಅಧಿಕಾರಕ್ಕೆ ತರಲು ಟೊಂಕ ಕಟ್ಟಿ ನಿಂತಿದ್ದಾರೆ. ಪಕ್ಷದ ಬಲವರ್ಧನೆಗೆ ಹೊಸ ಯೋಜನೆ ರೂಪಿಸಿದ್ದು, ಒಡಿಶಾ ಮಾದರಿ ರಾಜ್ಯದಲ್ಲಿ ಅಳವಡಿಸಲು ಚಿಂತನೆ ಮಾಡಿದ್ದಾರೆ.
ಈ ಬಾರಿ ಒಡಿಶಾ ಚುನಾವಣೆಯಲ್ಲಿ ಸಿಎಂ ನವೀನ್ ಪಾಟ್ನಾಯಕ್ ಮಹಿಳೆಯರಿಗೆ ಹೆಚ್ಚು ಟಿಕೆಟ್ ಕೊಟ್ಟಿದ್ದರು. ಮಹಿಳೆಯರಿಗೆ ಶೇ.33 ಮೀಸಲಾತಿ ಎಂಬ ತಂತ್ರ ಬಳಕೆ ಮಾಡಿ ಟಿಕೆಟ್ ಹಂಚಿಕೆ ಮಾಡಿ ಯಶಸ್ಸು ಕೂಡಾ ಆಗಿದ್ದರು. ಇದೇ ತಂತ್ರಗಾರಿಕೆಯನ್ನು ಜೆಡಿಎಸ್ ವರಿಷ್ಠ ದೇವೇಗೌಡ ರಾಜ್ಯದಲ್ಲೂ ಜಾರಿಗೆ ತರಲು ನಿರ್ಧರಿಸಿದ್ದು, ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಬಾರಿ ಟಿಕೆಟ್ ನೀಡಿ ಮಹಿಳಾ ಮತದಾರರನ್ನು ಸೆಳೆಯಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಲೋಕಸಭೆಯಲ್ಲಿ ಹಿಂದೆ ದೇವೇಗೌಡರು ಮಹಿಳೆಯರಿಗೆ ಶೇ.33 ಮೀಸಲಾತಿ ಸಿಗಬೇಕು ಅಂತ ಹೋರಾಟ ಮಾಡಿದ್ರು. ಆದ್ರೆ ಅದು ಇನ್ನು ಈಡೇರಿಲ್ಲ. ಇನ್ನು ಕೂಡಾ ಅ ಕಾಯ್ದೆ ಸಂಸತ್ ನಲ್ಲಿ ಧೂಳು ಹೊಡೆಯುತ್ತಿದೆ. ಕಾಯ್ದೆ ಜಾರಿಗೆ ಬರಲಿ ಬರದೇ ಇರಲಿ. ನಾವು ಮಹಿಳೆಗೆ ಆದ್ಯತೆ ಕೊಟ್ಟು ಮಹಿಳಾ ಮತದಾರರನ್ನ ಒಲಿಸಿಕೊಳ್ಳೋಣ ಅಂತ ದೇವೇಗೌಡರು ಚಿಂತನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
2023 ರ ಚುನಾವಣೆಯಲ್ಲಿ ಶೇ.33 ಟಿಕೆಟ್ ಮಹಿಳೆಯರಿಗೆ ನೀಡಲು ದೇವೇಗೌಡರು ಚಿಂತನೆ ಮಾಡಿದ್ದಾರೆ ಅಂತ ಜೆಡಿಎಸ್ ಮೂಲಗಳು ಹೇಳುತ್ತಿವೆ. ಈಗಾಗಲೇ ಆಸಕ್ತ ಮಹಿಳೆಯರಿಗೆ ಪಕ್ಷ ಸಂಘಟನೆ ಮಾಡಲು ದೇವೇಗೌಡರು ಸೂಚನೆ ನೀಡಿದ್ದಾರೆ. ಮಹಿಳಾ ಘಟಕವನ್ನ ಮತ್ತಷ್ಟು ಬಲಪಡಿಸೋದು, ಮಹಿಳಾ ಸದಸ್ಯರ ನೋಂದಣಿಗೂ ಚಾಲನೆ ಕೊಡಲು ಗೌಡರು ಸೂಚನೆ ನೀಡಿದ್ದಾರೆ. ಪಕ್ಷ ಸಂಘಟನೆ ಮಾಡೋ ಮಹಿಳೆಯರಿಗೆ ಟಿಕೆಟ್ ಕೊಡೋ ಚಿಂತನೆಯನ್ನ ದೇವೇಗೌಡರು ಇಟ್ಟುಕೊಂಡಿದ್ದಾರೆ. ಮಹಿಳೆಯರಿಗೆ ಟಿಕೆಟ್ ನೀಡುವ ಮೂಲಕ ಮಹಿಳಾ ಮತದಾರರನ್ನು ಪಕ್ಷಕ್ಕೆ ಸೆಳೆದು, ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರೋಕೆ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.