ಬೆಂಗಳೂರು: ನಿಖಿಲ್ ಎಲ್ಲಿದ್ದಿಯಪ್ಪ ಅನ್ನೋದು ಲೋಕಸಭಾ ಚುನಾವಣಾ ಸಮಯದಲ್ಲಿ ಮಂಡ್ಯ ಅಲ್ಲದೆ ಇಂಡಿಯಾ ಗಡಿ ದಾಟಿ ಹೊರ ದೇಶದಲ್ಲೂ ಫೇಮಸ್ ಆಗಿತ್ತು. ಆದರೆ ಸೋಲಿನ ಆಘಾತದಲ್ಲಿದ್ದ ನಿಖಿಲ್ ಈಗ ಅದರಿಂದ ಹೊರ ಬಂದು ಮುಂದಿನ ರಾಜಕೀಯ ಜೀವನದ ಸಿದ್ಧತೆಯಲ್ಲಿದ್ದಾರೆ. ಅದಕ್ಕಾಗಿ ನಿಖಿಲ್‍ಗೆ ಭಾನುವಾರ ಗುರುಮಂತ್ರ ಭೋದನೆಯಾಗಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹೌದು. ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ನಿಖಿಲ್ ಗೆ ರಾಜನೀತಿಯ ಪಾಠ ಮಾಡಿದ್ದಾರೆ. ಸೋಲನ್ನ ಹೇಗೆ ಎದುರಿಸಬೇಕು, ಸೋಲಿನಿಂದ ಗೆಲುವಿನ ಕಡೆಗೆ ನಡೆದು ಹೋಗುವುದು ಹೇಗೆ ಎಂಬುದರ ಕುರಿತು ಪಾಠ ಮಾಡಿದ್ದಾರೆ.
Advertisement
ಸೋಲಿನಿಂದ ಬೇಸರವಾಗಿದ್ದ ನಿಖಿಲ್ ಅವರನ್ನ ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ದೇವೇಗೌಡರು ರಾಜನೀತಿ ಬೋಧಿಸಿದ್ದಾರೆ. ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಎರಡನ್ನೂ ಆತ್ಮವಿಶ್ವಾಸದಿಂದಲೇ ಎದುರಿಸಬೇಕು ಎಂದು ತಮ್ಮ ಮೊಮ್ಮಗನಿಗೆ ರಾಜಪಾಠ ಬೋಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ತಾತನ ಪಾಠ, ಮೊಮ್ಮಗನ ಉತ್ತರ:
ಚುನಾವಣೆ ಅಂದಮೇಲೆ ಸೋಲು-ಗೆಲುವು ಎಲ್ಲವೂ ಸಹಜ. ಅದನ್ನ ಮನಸ್ಸಿಗೆ ಹಚ್ಚಿಕೊಂಡು ಬೇಸರ ಮಾಡಿಕೊಳ್ಳುವುದಲ್ಲ. ಎಲ್ಲವನ್ನ ಮರೆತು ಮುಂದುವರಿಯಬೇಕು ಎಂದು ಎಚ್‍ಡಿಡಿ ಹೇಳಿದ್ದಾರೆ. ಇದಕ್ಕೆ ನಾನೇನು ಸೋತ ಬೇಸರದಲ್ಲಿಲ್ಲ. ಆದರೆ ನಿಮಗೆ ಹಾಗೂ ಅಪ್ಪನಿಗೆ ಅಷ್ಟೊಂದು ಪ್ರೀತಿ ತೋರಿಸುವ ಮಂಡ್ಯ ಜನ ನನ್ನನ್ನ ಕೈ ಬಿಟ್ಟಿದ್ದು ನನಗೆ ಬೇಜಾರಾಯಿತು ಅಷ್ಟೇ ಎಂದಿದ್ದಾರೆ.
Advertisement
ಎಲೆಕ್ಷನ್ ಅಂದ ಮೇಲೆ ಸೋಲು-ಗೆಲುವು ಎಲ್ಲಾ ಸಾಮಾನ್ಯ. ಯಾವುದನ್ನೂ ಜಾಸ್ತಿ ಮನಸ್ಸಿಗೆ ಹಚ್ಕೋಬೇಡ. ಮುಂದೆ ಏನು ಮಾಡಬೇಕು ಅನ್ನೋದನ್ನ ನೀನೇ ತೀರ್ಮಾನ ಮಾಡು ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ನಿಖಿಲ್, ಇಲ್ಲ ನಾನು ಮಂಡ್ಯಕ್ಕೆ ಹೋಗಬೇಕು ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಬೇಕು ಅಂದುಕೊಂಡಿದ್ದೇನೆ. ಒಂದೆರಡು ದಿನದಲ್ಲಿ ಮಂಡ್ಯಕ್ಕೆ ಹೋಗುತ್ತೇನೆ ಎಂದು ಉತ್ತರಿಸಿದ್ದಾರೆ.
ರಾಜಕಾರಣದಲ್ಲಿ ನಮ್ಮಗುರಿ ಸ್ಪಷ್ಟವಾಗಿರಬೇಕು. ಎಷ್ಟೇ ಕಷ್ಟ ಆದರೂ ಗುರಿ ಮುಟ್ಟುವ ಛಲ ಇರಬೇಕು. ನೀನು ಮಂಡ್ಯದಲ್ಲೇ ರಾಜಕಾರಣ ಮಾಡೋದಾದ್ರೆ ಸ್ಪಷ್ಟವಾದ ತೀರ್ಮಾನ ಮಾಡಿ ಮುಂದುವರಿ. ಮುಂದೆ ಹೋದ ಮೇಲೆ ಹಿಂದೆ ಬರೋ ಹಾಗಿರಬಾರದು ಎಂದು ಎಚ್‍ಡಿಡಿ ಮಾತಿಗೆ ನಿಖಿಲ್, ಇಲ್ಲ ತಾತಾ ಇಷ್ಟು ಮುಂದೆ ಹೋದ ಮೇಲೆ ಹಿಂದೆ ಬರುವ ಪ್ರಶ್ನೆಯೇ ಇಲ್ಲ. ಎಲ್ಲಿ ಸೋತಿದ್ದೀನಿ ಅಲ್ಲೇ ಗೆಲ್ಲಬೇಕು ಗೆಲ್ಲುತ್ತೇನೆ ಎಂದು ತಿಳಿಸಿದ್ದಾರೆ.
ಯಾರ ವಿರುದ್ಧ ಮಾತನಾಡಬೇಡ. ನಿನ್ನ ಪಾಡಿಗೆ ನೀನು ಕೈಲಾದ ಕೆಲಸ ಮಾಡಿಕೊಂಡು ಹೋಗು. ಜನ ಅವರಾಗಿಯೇ ನಿನ್ನ ಇಷ್ಟ ಪಡಬೇಕು. ಸೋಲಿಸಿದರೂ ನಮ್ಮ ಜೊತೆಗಿದ್ದು ಕಷ್ಟ ಸುಖಕ್ಕೆ ಸ್ಪಂದಿಸಿದ ಅನ್ನಬೇಕು. ಹಾಗೆ ಕೆಲಸ ಮಾಡಬೇಕು ಅದಕ್ಕೆ ಬದ್ಧತೆ ಇರಬೇಕು ಎಂದಿದ್ದಾರೆ. ಇದಕ್ಕೆ ನಾನು ಯಾರ ವಿರುದ್ಧವೂ ಮಾತನಾಡಲ್ಲ. ಮಂಡ್ಯದಲ್ಲೇ ಇದ್ದು ಕೆಲಸ ಮಾಡುತ್ತೇನೆ ಎಂದು ನಿಖಿಲ್ ಉತ್ತರಿಸಿದ್ದಾರೆ.
ಇನ್ನೊಂದು ವಿಷಯ ತಿಳ್ಕೋ ನೀನು ಮಂಡ್ಯದಲ್ಲಿ ಓಡಾಡೋದು ನಾಳೆ ಇನ್ಯಾರೋ ರಾಮನಗರ, ಮಾಗಡಿ ಅಲ್ಲಿ ನಿಂತ್ರೆ ಸುಲಭವಾಗಿ ಗೆಲ್ಲಬಹುದು ಅಂದ್ರೆ ಅವಾಗ ಇನ್ನೊಂದು ತರ ಯೋಚನೆ ಮಾಡೋ ಹಾಗೆ ಮಾಡ್ಕೋಬೇಡ ಎಂದು ಹೇಳಿದ್ದಕ್ಕೆ ನಿಖಿಲ್, ಖಂಡಿತಾ ಇಲ್ಲ ತಾತಾ ನಾನು ಬೇರೆ ಯೋಚನೆ ಮಾಡಲ್ಲ. ನನಗೆ ನನ್ನ ಸೋಲಿಗಿಂತ ನಿಮ್ಮ ಸೋಲು ಜಾಸ್ತಿ ನೋವಾಯ್ತು ಎಂದು ತಿಳಿಸಿದ್ದಾರೆ.
ಇದೆಲ್ಲ ಕಾಮನ್ ಏನು ಮಾಡೋಕೆ ಆಗಲ್ಲ. ಎಲ್ಲಾ ದೈವಿಚ್ಛೆ. ನಾನು ಸೋಲಬೇಕು ಎಂದು ದೇವರು ಇಚ್ಛೆ ಪಟ್ಟಾಗ ಯಾರು ಏನು ಮಾಡೋಕೆ ಆಗುತ್ತೆ? ನಾನು ಸೋತೆ ಎಂದು ಮನೆಯಲ್ಲಿ ಕೂರಲ್ಲ. ಮತ್ತೆ ರಾಜ್ಯ ಪ್ರವಾಸ ಮಾಡುತ್ತೇನೆ. ಪಕ್ಷ ಕಟ್ಟೋಕೆ ರಾಜ್ಯ ಪ್ರವಾಸ ಹೋಗ್ತಿನಿ. ನಿನಗೂ ಸಾಕಷ್ಟು ಅನುಭವ ಆಗಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡು ಎಂದು ಎಚ್‍ಡಿಡಿ ಸಲಹೆ ನೀಡಿದ್ದಾರೆ. ಖಂಡಿತ ತಾತಾ, ನಾನು ಮಂಡ್ಯ ಜೊತೆಗೆ ರಾಜ್ಯದ ಬೇರೆ ಕಡೆಯಲ್ಲೂ ಓಡಾಡುತ್ತೇನೆ. ನಿಮ್ಮ ಜೊತೆ ರಾಜ್ಯ ಸುತ್ತಿ ಪಕ್ಷ ಕಟ್ಟುತ್ತೇನೆ ಎಂದು ತಾತನ ಮಾತಿಗೆ ನಿಖಿಲ್ ದನಿಗೂಡಿಸಿದ್ದಾರೆ.
ಪ್ರಾದೇಶಿಕ ಪಕ್ಷ ಉಳಿಬೇಕು. ಕೆಲವರು ಪಕ್ಷ ದೇವೇಗೌಡರ ಕುಟುಂಬದ ಆಸ್ತಿ ಅಂತಾರೆ. ಪ್ರಾದೇಶಿಕ ಪಕ್ಷ ಉಳಿಯಬೇಕು. ಕುಟುಂಬದ ಆಸ್ತಿ ಅಲ್ಲ ರಾಜ್ಯದ ಹಿತ ಮುಖ್ಯವಾಗುತ್ತದೆ. ತಾತಾ ಖಂಡಿತ ಪಕ್ಷ ಕಟ್ಟೋಣ. ಇದರಿಂದ ಅಪ್ಪನಿಗೂ ಸಹಾಯ ಮಾಡಿದ ಹಾಗಾಗುತ್ತದೆ. ಅವರು ಸರ್ಕಾರದ ಆಡಳಿತದ ಕಡೆ ಗಮನ ಹರಿಸಲಿ. ನಾನು ನಿಮ್ಮ ಜೊತೆ ಪಕ್ಷದ ಸಂಘಟನೆಗೆ ಕೈ ಜೋಡಿಸ್ತಿನಿ ಎಂದಿದ್ದಾರೆ.
ಸೋಲಿಗೆ ಎದೆಗುಂದಬೇಡ. ಯಾರಿಗೂ ಬೈಬೇಡ, ಗುರಿ ಸ್ಪಷ್ಟವಾಗಿರಲಿ ರಾಜಕೀಯವಾಗಿ ಮುಂದುವರಿ ಎಂದು ಪಾಠ ಮಾಡಿದ್ದಾರೆ. ಒಟ್ಟಿನಲ್ಲಿ ಇದೀಗ ರಾಜಕೀಯ ಚಾಣಕ್ಯ ದೇವೇಗೌಡರ ಹಿತ ನುಡಿ, ಗುರುಬೋಧನೆಗೆ ನಿಖಿಲ್ ರಿಂದ ಯಾವ ರೀತಿಯ ರಾಜಕೀಯ ನಡೆಗೆ ಕಾರಣವಾಗಬಹುದು ಎಂಬ ಕುತೂಹಲವನ್ನು ಈಗ ಹುಟ್ಟು ಹಾಕಿದೆ.