– ಇಂದು ಮಾತನಾಡಲು ನಿನ್ನೆ ಟ್ವೀಟ್ ಮಾಡಿಲ್ಲ
– ಬಿಜೆಪಿ ವಿರುದ್ಧ ಕಿಡಿ, ಮೋದಿಗೆ ಎಚ್ಚರಿಕೆ
ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಬಂಧನ ಮಾಡಿರುವ ವಿಚಾರದಿಂದ ನನಗೆ ತುಂಬಾ ನೋವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡಿಯವರು ಅರೆಸ್ಟ್ ಮಾಡಿದ್ದು, ನಂತರ ಮೆಡಿಕಲ್ ಚೆಕಪ್ ಮಾಡಿಸಲು ಆಸ್ಪತ್ರೆಗೆ ಹೋಗಿದ್ದಾರೆ. ಇಂದು ಮಾತನಾಡುವ ಸಲುವಾಗಿ ನಿನ್ನೆ ನಾನು ಈ ಬಗ್ಗೆ ಟ್ವೀಟ್ ಮಾಡಲು ಹೋಗಿಲ್ಲ ಎಂದರು.
Advertisement
ನನಗೆ ತುಂಬಾ ನೋವಾಗಿದೆ. ಹೈಕೋರ್ಟಿನಲ್ಲಿ ಪರಿಹಾರ ಸಿಕ್ಕದೆ ಹೋದ ಮೇಲೆ ಇಡಿ ನೊಟೀಸ್ ನೀಡಿತ್ತು. ಡಿಕೆಶಿ ಅವರು ನೊಟೀಸಿಗೆ ಬೆಲೆ ಕೊಟ್ಟು ದೆಹಲಿಗೆ ಹೋದರು. ಇಡಿ ಅವರ ಆಫೀಸಿಗೆ ಹೋಗಿದ್ದರು. ಸತತ ನಾಲ್ಕು ದಿನಗಳ ವಿಚಾರಣೆಗೆ ಅವರು ಸಹಕಾರ ನೀಡಿದ್ದಾರೆ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ ಎಂದರು.
Advertisement
Advertisement
ಗೌರಿ ಹಬ್ಬದ ದಿನ ಅವರು ಪೂಜೆ ಮಾಡೋದು ಸಂಪ್ರದಾಯ. ಆದರೆ ತಂದೆ ಕಾರ್ಯ ಮಾಡಲು ಅವಕಾಶ ಕೇಳಿದ್ದರೂ ಇಡಿ ಅವಕಾಶ ಕೊಟ್ಟಿಲ್ಲ. ಈ ಮೂಲಕ ನಿಷ್ಕರಣೆಯಿಂದ ಇಡಿ ನಡೆದುಕೊಂಡಿದೆ. ಈ ಘಟನೆ ನನಗೆ ತುಂಬಾ ನೋವಾಗಿದೆ. ಇಡಿ ಪೂಜೆಗೆ ಅವಕಾಶ ಕೊಡಬೇಕಿತ್ತು. ಸಂಜೆ ವಾಪಸ್ ವಿಚಾರಣೆ ಮಾಡಿದ್ದರೆ ಏನೂ ಆಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
ಸರಿಯಾಗಿ ಉತ್ತರ ಕೊಟ್ಟಿಲ್ಲ ಎಂದು 4 ದಿನ ಆದ ಮೇಲೆ ಅರೆಸ್ಟ್ ಮಾಡಿದ್ದಾರೆ. ಅವರು ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಕೊಡಬೇಕು ಅಂತಾರೆ. ಅವರಿಗೆ ಸಮಾಧಾನ ಆಗೋ ಉತ್ತರ ಕೊಡಬೇಕಿತ್ತಾ ಎಂದು ಪ್ರಶ್ನಿಸಿದರು. ಅರೆಸ್ಟ್ ಆದ ಮೇಲೆ ಉತ್ತರ ಕೊಡುವುದಕ್ಕೆ ಮಾನಸಿಕ ಒತ್ತಡ ಕೊಡುವ ಯೋಚನೆ ಇಡಿಯದ್ದಾಗಿರಬಹುದು. ಅವರ ನಿರೀಕ್ಷೆಯಂತೆ ಉತ್ತರ ಕೊಟ್ಟಿಲ್ಲ ಎಂದು ಅರೆಸ್ಟ್ ಮಾಡಿದ್ದಾರೆ. ಬಂಧನ ಮಾಡಿ ಒತ್ತಡ ಹಾಕಿ ಉತ್ತರ ಪಡೆಯೋ ಭಾವನೆ ಇಡಿಗೆ ಇರಬಹುದು. ಇಡಿ ವರ್ತನೆಯನ್ನು ನಾನು ವಿರೋಧಿಸುತ್ತೇನೆ. ಬಂಧಿಸುವುದು ಯೋಗ್ಯವಾದ ವರ್ತನೆ ಅಲ್ಲ. ಅದಕ್ಕೆ ರಾಜ್ಯದಲ್ಲಿ ಪಕ್ಷ ಬೇಧ ಮರೆತು ಪ್ರತಿಭಟನೆ ನಡೆಯುತ್ತಿದೆ. ಇದು ರಾಜಕೀಯ ಪ್ರೇರಿತ ಬಂಧನ ಎಂದು ಕಿಡಿಕಾರಿದರು.
ಸಮ್ಮಿಶ್ರ ಸರ್ಕಾರ ಇದ್ದಾಗಲೂ ಅನೇಕ ಬಾರಿ ಐಟಿ ದಾಳಿ ನಡೆದಿತ್ತು. ಅವರಿಗೆ ಕಷ್ಟ ಇದ್ದರೂ ಸಮ್ಮಿಶ್ರ ಸರ್ಕಾರದ ಪರವಾಗಿ ಇದ್ದರು. ಆಪರೇಷನ್ ಬಗ್ಗೆ ಬಹಿರಂಗವಾಗಿ ಮಾತಾಡಿದ್ದರು. ಡಿಕೆಶಿ ಹೀಗೆ ಮಾತಾಡಿದ್ದು ದೇಶ ಆಳುವವರಿಗೆ ಕಿರಿಕಿರಿಯಾಗಿರಬಹುದು. ಹೀಗಾಗಿ ಡಿಕೆಶಿ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಮೋದಿ ಹಾಗೂ ಅಮಿತ್ ಶಾ ಅವರ ಹೆಸರು ಹೇಳದೇ ಗರಂ ಆದರು.
ಕೋರ್ಟಿನಲ್ಲಿ ನ್ಯಾಯ ಸಿಗುವ ಭರವಸೆ ಇದೆ. ದೇಶಾದ್ಯಂತ ತನಿಖಾ ಸಂಸ್ಥೆ ದುರುಪಯೋಗ ಮಾಡಿಕೊಂಡಿರೋದು ಗೊತ್ತಿದೆ. ಡಿಕೆಶಿ ಇದರಿಂದ ಹೊರಬರುತ್ತಾರೆ. ಕೋರ್ಟಿನಿಂದ ಅವರಿಗೆ ನ್ಯಾಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಪ್ಪು-ತಿಂದವರು ನೀರು ಕುಡಿಯಬೇಕು ಅನ್ನೋ ಬಿಜೆಪಿ ನಾಯಕರ ಹೇಳಿಕೆಗೆ ನಾನು ಉತ್ತರ ಕೊಡೊಲ್ಲ. ಯಡಿಯೂರಪ್ಪ ಹಾಗೂ ನನ್ನ ಮಗ ಒಟ್ಟಿಗೆ ಸರ್ಕಾರ ಮಾಡಿಲ್ವಾ. ಹೀಗಾಗಿ ಅವರ ಬಗ್ಗೆ ಮಾತನಾಡಲು ತುಂಬಾ ಇದೆ. ಬೆಂಗಳೂರಿನಲ್ಲಿ ನಮ್ಮ ಪಕ್ಷದವರು ಕಾಂಗ್ರೆಸ್ ಜೊತೆ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಶಕ್ತಿ ಇರೋ ಕಡೆ ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಮೋದಿಗೆ ಎಚ್ಚರಿಕೆ:
ಇದೇ ವೇಳೆ ರಾಜ್ಯದ ನೆರೆಗೆ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಗೆ ಎಚ್‍ಡಿಡಿ ಎಚ್ಚರಿಕೆ ಕೊಟ್ಟರು. ನಾನು ಹೇಳಿಕೆ ಕೊಡೋದು ಮಾತ್ರ ಅಲ್ಲ. ನನ್ನ ಸ್ವಭಾವ ಎಲ್ಲರಿಗೂ ಗೊತ್ತು. ನಾನು ಹುಟ್ಟು ಹೋರಾಟಗಾರ. ನಾನು ಸೀಮೆ ಎಣ್ಣೆ ಡಬ್ಬ ಇಟ್ಟುಕೊಂಡು ಪ್ರತಿಭಟನೆ ಮಾಡಿದವನು. ಜನರಿಗಾಗಿ ಹೋರಾಟ ಮಾಡೋಕೆ ನಾನು ಸ್ಟೇಟಸ್ ನೋಡಲ್ಲ. ಅಗತ್ಯ ಬಿದ್ದರೆ ರೈತರನ್ನ ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡುವ ಬಗ್ಗೆ ಚಿಂತನೆ ಮಾಡುತ್ತೇನೆ. ಜನರಿಗಾಗಿ ನಾನು ಯಾವ ಹೋರಾಟಕ್ಕೂ ಸಿದ್ಧ. ಈಗಾಗಲೇ ನಾನು ಪತ್ರ ಬರೆದಿದ್ದೇನೆ. ಯಾವುದಕ್ಕೂ ಉತ್ತರ ಬಂದಿಲ್ಲ. ಬೆಂಗಳೂರಿಗೆ ಮೋದಿ ಬಂದಾಗ ನಾನು ಮಾತಾನಾಡಲ್ಲ. ಸಿಎಂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಸಿಎಂ ಮಾತನಾಡಲಿ. ಅಮೇಲೆ ಏನ್ ಮಾಡೋದು ಎಂದು ನಾನು ನಿರ್ಧಾರ ಮಾಡುವುದಾಗಿ ಎಚ್‍ಡಿಡಿ ಹೇಳಿದ್ದಾರೆ.