ರಾಜಕಾರಣದಲ್ಲಿ ಉತ್ತುಂಗದಲ್ಲಿ ಕಾಣುವ ಮೊದಲನೇ ವ್ಯಕ್ತಿ ವಾಜಪೇಯಿ: ಹೆಚ್‍ಡಿಡಿ

Public TV
2 Min Read
HD Deve Gowda Vajapeyee

ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಟಲ್ ಬಿಹಾರ್ ವಾಜಪೇಯಿಯವರು ರಾಜಕಾರಣದಲ್ಲಿ ಉತ್ತುಂಗದಲ್ಲಿ ಕಾಣುವ ಮೊದಲನೇ ವ್ಯಕ್ತಿಯೆಂದು ಕೊಂಡಾಡಿದ್ದಾರೆ.

ಭಾವುಕರಾದ ಎಚ್‍ಡಿಡಿ:
ವಾಜಪೇಯಿಯವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ. 4 ದಶಕಗಳ ಕಾಲ ರಾಜಕೀಯದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಹೊಂದಿ ಇಂದು ತಮ್ಮ ಪಯಣವನ್ನು ಮುಕ್ತಗೊಳಿಸಿದ್ದಾರೆ. ಅವರು ವಿದೇಶಾಂಗ ಮಂತ್ರಿಯಾಗಿ, ಪ್ರಧಾನಿಯಾಗಿ ರಾಷ್ಟ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ.

h190520034

ಅವರೊಬ್ಬ ಶ್ರೇಷ್ಠ ನಾಯಕರು. ಅವರ ಭಾಷಣ ಕೇಳಲು ವಿರೋಧ ಪಕ್ಷದಲ್ಲಿದ್ದ ನಾನು ಸ್ವತಃ ತೆರಳುತ್ತಿದ್ದೆ. ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ತನ್ನ ಶತ್ರುವನ್ನು ಸಹ ಎಂದಿಗೂ ಕಟುವಾಗಿ ಮಾತನಾಡಿಸಿದ ವ್ಯಕ್ತಿ ಅವರಲ್ಲ. ನಾನು ಪ್ರಧಾನಿಯಾಗಿದ್ದಾಗ ಲೋಕಸಭಾ ಕಾರ್ಯಕಲಾಪಕ್ಕೆ ಎಂದಿಗೂ ಅಡ್ಡಿಪಡಿಸಿರಲಿಲ್ಲ. ಯುದ್ಧ ಸಾಮಗ್ರಿ ಖರೀದಿ ವೇಳೇ ನನ್ನ ಸರ್ಕಾರದ ಪರ ನಿಂತಿದ್ದರು. ಅಲ್ಲದೇ ನಾನು ರಾಜೀನಾಮೆ ಕೊಡುವ ಸಮಯ ಬಂದಾಗ, ನೀವು ನಿಶ್ಚಂತೆಯಿಂದಿರಿ ನಾನು ನಿಮ್ಮ ಸ್ಥಾನವನ್ನು ಉಳಿಸಿಕೊಡುತ್ತೇನೆಂದು ಪಕ್ಷದ ಮುಖಂಡರ ಮನವೊಲಿಸಿದ ಮಹಾನ್ ವ್ಯಕ್ತಿ ವಾಜಪೇಯಿ.

ಅಟಟಲ್ ಬಿಹಾರಿ ವಾಜಪೇಯಿಯವರು ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆದ ವ್ಯಕ್ತಿಯಾಗಿದ್ದಾರೆ. ಅಲ್ಲದೇ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ಸಂಬಂಧ ಉತ್ತಮ ಪಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಅಲ್ಲದೇ ಲಾಹೋರ್‍ಗೂ ತೆರಳಿ ಮುಷರಫ್‍ರೊಂದಿಗೆ ಮಾತುಕತೆಯನ್ನು ಮಾಡಿದ್ದರು. ಆದರೆ ಅವರ ಪ್ರಯತ್ನ ಸಫಲವಾಗಲಿಲ್ಲ. ಪಾಕಿಸ್ತಾನ ತನ್ನ ಕುತಂತ್ರದಿಂದ ಯುದ್ಧ ಮಾಡಿತು. ಆದರೆ ನಮ್ಮ ಶಕ್ತಿ ಏನೆಂದು ಕಾರ್ಗಿಲ್ ಯುದ್ಧದ ಮೂಲಕ ಪಾಕಿಸ್ತಾನಕ್ಕೆ ತೋರಿಸಿ ಕೊಟ್ಟಿದ್ದರು.

h290520037

ನಾನು ಪ್ರಧಾನಿಯಾಗಿದ್ದಾಗ ಅಣು ಪರೀಕ್ಷೆ ನಿರ್ಧಾರಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಅವರು ಅದನ್ನು ಮಾಡಿಸಿ ತೋರಿಸಿ, ಎಲ್ಲಾ ರಾಷ್ಟ್ರಗಳಲ್ಲೂ ಭಯ ಹುಟ್ಟಿಸುವಂತೆ ಮಾಡಿದ್ದರು. ರಾಜಕಾರಣ ಹೇಗೆ ನಡೆಸಬೇಕು ಅನ್ನೋದನ್ನ ಅವರ ಗೋದ್ರಾ ಪ್ರಕರಣವೇ ಸಾಕ್ಷಿಯಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜಧರ್ಮ ಪಾಲನೆ ಮಾಡಿಲ್ಲ ಅಂತ ಹೇಳಿದ್ದರು. ಅದು ವಾಜಪೇಯಿಯವರ ವ್ಯಕ್ತಿತ್ವ, ಇಂದು ನಮ್ಮನ್ನೆಲ್ಲಾ ಅವರು ಬಿಟ್ಟುಹೋಗಿದ್ದಾರೆ ವಿಷಾದ ವ್ಯಕ್ತಪಡಿಸಿದರು.

ಅಟಲ್ ಬಿಹಾರಿ ವಾಜಪೇಯಿಯವರು ದೇಶಕ್ಕೆ ಅಪಾರ ಕೊಡಗೆಯನ್ನು ನೀಡಿದ್ದಾರೆ. ಅವರು ಜಾತಿ, ಧರ್ಮ ಎನ್ನದೇ ಕೇವಲ ಭಾರತೀಯರ ಅಭಿವೃದ್ಧಿಗೆ ಶ್ರಮಿಸಿದ್ದರು. ಯಾರ ಮನಸ್ಸನ್ನು ನೋಯಿಸಬಾರದು ಅನ್ನುವುದು ಅವರ ಆಶಾವಾದವಾಗಿತ್ತು. ನನ್ನ ಸರ್ಕಾರವನ್ನು ಉಳಿಸಲು ಕೊನೆ ಕ್ಷಣದವರೆಗೂ ಪ್ರಯತ್ನ ಪಟ್ಟವರು ಅಟಲ್ ಜೀ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ಅಗಲಿಕೆ ತುಂಬುವ ಶಕ್ತಿ ನೀಡಲಿ, ನಾನು ಸಹ ದೆಹಲಿಗೆ ಪ್ರಯಾಣ ಬೆಳೆಸಿ, ಅವರ ಅಂತಿಮ ದರ್ಶನ ಮಾಡಿಕೊಳ್ಳುತ್ತೇನೆಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *