ಬೆಂಗಳೂರು: ಬಿಜೆಪಿಯ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡದಂತೆ ಕೆಳ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಇಂದು ತೆರವುಗೊಳಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದೆ.
ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ತೇಜಸ್ವಿ ಸೂರ್ಯ ಅವರಿಗೆ ಹಿನ್ನಡೆಯಾಗಿದ್ದು, ಸುದ್ದಿ ಪ್ರಕಟ ಮಾಡುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ತೇಜಸ್ವಿ ಅವರ ಬಗ್ಗೆ ಸರಿ ಎನಿಸಿದ ಸುದ್ದಿಯನ್ನ ಪ್ರಸಾರ ಮಾಡಲು ಮಾಧ್ಯಮಗಳ ವಿವೇಚನೆಗೆ ಬಿಡಲಾಗಿದೆ. ಆದರೆ ಮಾಧ್ಯಮಗಳ ವರದಿಗಳು ಅವರಿಗೆ ಅವಹೇಳನಕಾರಿ ಎಂದು ಅನಿಸಿದರೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸೂಚಿಸಿದೆ.
ನಮ್ಮ ಸಂವಿಧಾನದಲ್ಲಿ 19 (1)ಎ ವಿಧಿಯ ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಲಾಗಿದೆ. ಪ್ರತಿಯೊಬ್ಬ ಮತದಾರನಿಗೂ ತನ್ನ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವವರ ಬಗ್ಗೆ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಮಾನಹಾನಿ ಹೇಳಿಕೆ ಅಥವಾ ದೃಶ್ಯ ಬಿತ್ತರಗೊಳ್ಳುತ್ತದೆ ಅಂಶವನ್ನು ಪ್ರಕ್ರಿಯೆ ನಡೆದ ಮೇಲೆ ನಿರ್ಧರಿಸಲು ಸಾಧ್ಯ. ಹೀಗಾಗಿ ಯಾವುದೇ ವ್ಯಕ್ತಿ ತನಗೆ ಮಾನಹಾನಿ ಆಗಿದ್ದರೆ ಸೂಕ್ತ ವೇದಿಕೆಗಳಲ್ಲಿ ಪ್ರಶ್ನೆ ಮಾಡಬಹುದು. ಈ ಕಾರಣಗಳಿಂದ ಪತ್ರಿಕೆ, ಟಿವಿ, ಫೇಸ್‍ಬುಕ್, ಯೂಟ್ಯೂಬ್ ನಂತಹ ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿ ಸೂರ್ಯ ಅವರ ವಿರುದ್ಧ ಸುದ್ದಿ ಪ್ರಕಟಿಸುವುದಕ್ಕೆ ನಗರದ ಸಿವಿಲ್ ನ್ಯಾಯಾಲಯ ನಿರ್ಬಂಧ ವಿಧಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ: ಲೋಕಸಭಾ ಸ್ಪರ್ಧಿ ಆಗಿರುವ ತೇಜಸ್ವಿ ಸೂರ್ಯ ಅವರ ಬಗ್ಗೆ ಮಹಿಳೆಯೊಬ್ಬರು ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತಂತೆ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿ, ಅವಹೇಳನಕಾರಿ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಬೇಕು ಎಂದು ತೇಜಸ್ವಿಯವರು ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸ್ವೀಕರಿಸಿದ ನಗರದ ಸಿವಿಲ್ ನ್ಯಾಯಾಲಯ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಿತ್ತು.