– `ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’; ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು
– ಇದೊಂದು ವಿವಾದದ ಅಂಶವೇ ಅಲ್ಲ ಎಂದ ಸಚಿವರು
ಬೆಂಗಳೂರು: `ಜ್ಞಾನದೇಗುಲವಿದು ಕೈಮುಗಿದು ಒಳಗೆ ಬನ್ನಿ’ ಘೋಷವಾಕ್ಯವನ್ನು ತೆಗೆದುಹಾಕುವ ಯಾವುದೇ ಆದೇಶವನ್ನು ಸರ್ಕಾರ ಹೊರಡಿಸಿಲ್ಲ. ಆದ್ರೆ ಮಕ್ಕಳಲ್ಲಿ ಪ್ರಶ್ನಿಸುವ ಸಾಮರ್ಥ ಬೆಳೆಸುವ ನಿಟ್ಟಿನಲ್ಲಿ ಇಂತಹ ಆಲೋಚನೆಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ನನ್ನ ಪ್ರಕಾರ ಇದೊಂದು ವಿವಾದದ ಅಂಶವೇ ಅಲ್ಲ ಎಂದು ಸಚಿವ ಹೆಚ್.ಸಿ ಮಹದೇವಪ್ಪ (HC Mahadevappa) ತಿಳಿಸಿದ್ದಾರೆ.
`ಜ್ಞಾನದೇಗುಲವಿದು ಕೈಮುಗಿದು ಒಳಗೆ ಬನ್ನಿ’ ವಸತಿ ಶಾಲೆಗಳ (Residential Schools) ದ್ವಾರದಲ್ಲಿದ್ದ ಬರಹ ಬದಲಾವಣೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ʻಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿʼ – ಬರಹ ಬದಲಾವಣೆ ಸಮರ್ಥಿಸಿಕೊಂಡ ಲಕ್ಷ್ಮಿ ಹೆಬ್ಬಾಳ್ಕರ್
Advertisement
Advertisement
ಸಚಿವರ ಪ್ರಕಟಣೆಯಲ್ಲಿ ಏನಿದೆ?
ಇನ್ನೂ ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನೂ ಹೊರಡಿಸಿರುವ ಸಚಿವರು, ಸರ್ಕಾರದ ವತಿಯಿಂದ ಈಗ ಪ್ರಸ್ತುತ ಇರುವ ಘೋಷವಾಕ್ಯವನ್ನು ತೆಗೆದುಹಾಕುವ ಯಾವುದೇ ಆದೇಶವನ್ನು ಹೊರಡಿಸಲಾಗಿಲ್ಲ. ಆದರೆ ಸೃಜನಾತ್ಮಕ ಕಲಿಕೆಯ ದೃಷ್ಟಿಯಿಂದ, ಮಕ್ಕಳಲ್ಲಿ ವೈಜ್ಞಾನಿಕತೆ ಹಾಗೂ ವೈಚಾರಿಕತೆಯನ್ನು ಮೂಡಿಸಿ ಅವರಲ್ಲಿ ಯೋಚನಾ ಶಕ್ತಿಯನ್ನು ಹರಡುವ ದೃಷ್ಟಿಯಿಂದ ಸಾಮಾಜಿಕ ಜಾಲತಾಣದ ಗುಂಪಿನಲ್ಲಿ ಚರ್ಚೆಯನ್ನು ನಡೆಸಿದ್ದು, `ಜ್ಞಾನ ದೇಗುಲವಿದು – ಧೈರ್ಯವಾಗಿ ಪ್ರಶ್ನಿಸಿ’ ಎಂದು ಶಾಲೆಗಳಲ್ಲಿ ಹಾಕಿದರೆ ಹೇಗೆ? ಎಂಬ ಆಲೋಚನೆಯನ್ನು ಕೆಲವರು ಮುಂದಿಟ್ಟಾಗ, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ: ಸರ್ಕಾರದ ಮುಟ್ಟಾಳತನ: ಜೋಶಿ ಆಕ್ರೋಶ
Advertisement
Advertisement
ಉತ್ತಮ ಆಲೋಚನೆಯನ್ನು ಹೊಂದಿದ ಈ ಸಾಲನ್ನು ಕೆಲವರು ಶಾಲೆಗಳಲ್ಲೂ ಬಳಸಿರುತ್ತಾರೆ. ಅಂದಹಾಗೆ ಜ್ಞಾನ ದೇಗುಲವಿದು – ಧೈರ್ಯವಾಗಿ ಪ್ರಶ್ನಿಸಿ ಎಂದರೆ ಅದು ಕುವೆಂಪು ಅವರು ಹೇಳುವ ವಿಚಾರ ಕ್ರಾಂತಿಗೆ ಆಹ್ವಾನ ಪ್ರಬಂಧದ ಆಶಯವೇ ಆಗಿದ್ದು, ಕುವೆಂಪು ಅವರಿಗೆ ಅವಮಾನ ಎಸಗುವ ಯಾವುದೇ ಪ್ರಮಾದವು ಇಲ್ಲಿ ಜರುಗಿರುವುದಿಲ್ಲ. ಶಿಕ್ಷಣದ ಉದ್ದೇಶವೇ ಮಕ್ಕಳಲ್ಲಿ ವೈಚಾರಿಕತೆಯ ಜೊತೆಗೆ, ಪ್ರಶ್ನಿಸುವ ಸಾಮರ್ಥ್ಯ ಬೆಳೆಸುವುದಾಗಿದೆ. ಐಸಾಕ್ ನ್ಯೂಟನ್, ಆಲ್ಬರ್ಟ್ ಐನ್ ಸ್ಟೀನ್ ನಿಂದ ಹಿಡಿದು ಬಹಳಷ್ಟು ವಿಜ್ಞಾನಿಗಳು ಇದನ್ನೇ ಪ್ರತಿಪಾದಿಸಿದ್ದು ಕಲಿಯುವ ಮಕ್ಕಳಲ್ಲಿ ಪ್ರಶ್ನಿಸುವ ಸಾಮರ್ಥವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಆಲೋಚನೆಗಳನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ನನ್ನ ಪ್ರಕಾರ ಇದೊಂದು ವಿವಾದದ ಅಂಶವೇ ಅಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಮಕ್ಕಳು ಅನ್ಯಾಯ ಆದಾಗ ಪ್ರಶ್ನೆ ಮಾಡ್ಬೇಕು, ದೌರ್ಜನ್ಯ ಆದಾಗ ಪ್ರತಿಭಟನೆ ಮಾಡಬೇಕು. ಅನ್ಯಾಯ ಆದವರ ಪರ ದನಿ ಎತ್ತಬೇಕು. ಆ ಸಾಲಿನಲ್ಲಿ ಏನು ಧೈರ್ಯ ತುಂಬಬೇಕು? ಅದನ್ನು ಮಾಡುತ್ತೇವೆ. ಕುವೆಂಪು ಜಾಗೃತಿ ಮೂಡಿಸಿದ್ದಾರೆ, ಸಂವಿಧಾನ ಕಾನೂನು ಮಾತನಾಡುವ ಹಕ್ಕು ಕೊಟ್ಟಿದೆ. ಸುಮ್ಮ-ಸುಮ್ಮನೆ ಇದನ್ನೆಲ್ಲ ಕಾಂಟ್ರವರ್ಸಿ ಮಾಡೋದು ಬೇಡ ಎಂದು ಮನವಿ ಮಾಡಿದ್ರು.
ಬಿಜೆಪಿಯವರು ಕಾಂಟ್ರವರ್ಸಿ ಮಾಡ್ತಿದ್ದಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯವರು ಕಾಂಟ್ರವರ್ಸಿ ಮಾಡದ ವಿಷಯ ಯಾವುದಿದೆ? ಅಭಿವೃದ್ಧಿ ಬಿಟ್ಟು, ಸಂವಿಧಾನದ ಆಶಯ ಬಿಟ್ಟು, ಕುವೆಂಪು ಅವರ ವೈಚಾರಿಕತೆ ನಿಲುವುಗಳನ್ನ ಬಿಟ್ಟು, ಬಸವಣ್ಣನ ಜಾತಿ ವಿನಾಶ ಬಿಟ್ಟು, ಸುಖಿ ರಾಜ್ಯ ಬಿಟ್ಟು ಮಾಡೋಕೆ ಇನ್ನೇನಿದೆ ಎಂದು ಕಿಡಿಕಾರಿದ್ದಾರೆ.
ಏನಿದು ವಿವಾದ?
ವಿಜಯಪುರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಬರಹವನ್ನು ಬದಲಿಸಿ ಹಾಕಿ ವಿವಾದಕ್ಕೀಡಾದ ಘಟನೆ ನಡೆದಿದೆ. ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ. ಇದು ಆಡಳಿತ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಚರ್ಚಗೆ ಗ್ರಾಸವಾಗಿದೆ. ಇದನ್ನೂ ಓದಿ: ಧೈರ್ಯವಾಗಿ ಪ್ರಶ್ನಿಸಿ ಅಂದಿದ್ದು ತಪ್ಪಿಲ್ಲ- ಕುವೆಂಪು ಬರಹ ಬದಲಿಕೆಗೆ ಪ್ರಿಯಾಂಕ್ ಖರ್ಗೆ ಸಮರ್ಥನೆ