ಟ್ವೀಟ್‍ಗೆ ನನಗೂ ಯಾವುದೇ ಸಂಬಂಧವಿಲ್ಲ, ಕೈ ಗೆಲುವಿನ ವಾತಾವರಣವನ್ನು ಕೆಡಿಸಲು ವಿರೋಧಿಗಳ ಕೆಲ್ಸ: ಮಹದೇವಪ್ಪ

Public TV
1 Min Read
M Veerappa Moily mhadevappa

ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಟ್ವೀಟ್ ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಲೋಕೋಪಯೋಗಿ ಸಚಿವ ಮಹದೇವಪ್ಪ  ಹೇಳಿದ್ದಾರೆ.

ಬಿಜೆಪಿ ವಿರುದ್ಧ ಪ್ರಕರಣ ತಿರುಗಿಸಲು ನೋಡಿದ ಸಚಿವರು, ಕಾಂಗ್ರೆಸ್ ಗೆ ಗೆಲುವಿನ ವಾತಾವಣ ಇದೆ. ಇದನ್ನು ಕೆಡಿಸಲು ವಿರೋಧಿಗಳ ಇಂತಹ ಕೆಲಸ ಮಾಡಿರಬಹುದು. ಬಿಜೆಪಿ ನಾಯಕರು ದಾಖಲೆ ಇಲ್ಲದೇ ಎಂದಿನಂತೆ ಹಳೇ ಆರೋಪ ಮಾಡುತ್ತಾರೆ. ನಾನು ಪಕ್ಷದ ಕೆಲಸ, ಸರ್ಕಾರದ ಕೆಲಸ ಮಾತ್ರ ಮಾಡುತ್ತೇನೆ ಅಷ್ಟೇ ಎಂದು ಹೇಳಿದರು.

mahadevappa

ಗಾಂಧಿ ಭವನ ರಸ್ತೆಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸೋಷಿಯಲ್ ಮೀಡಿಯಾ ಬಗ್ಗೆ ನನಗೆ ಗೊತ್ತಿಲ್ಲ. ಮೊಯ್ಲಿ ಅವರು ಟ್ವೀಟ್ ಮಾಡಿದ್ದು ಯಾಕೆ? ಡಿಲೀಟ್ ಮಾಡಿದ್ದು ಯಾಕೆ ಎನ್ನುವುದು ನನಗೆ ಗೊತ್ತಿಲ್ಲ. ಅವರೇನು ಚಿಕ್ಕ ಹುಡುಗ ಅಲ್ಲ. ನಾನು ಪಕ್ಷದ ಕಾರ್ಯಕರ್ತ. ಮೊಯ್ಲಿ ಅವರೇ ಟ್ವೀಟ್ ನನ್ನದಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಮತ್ತೇನು ಹೇಳಲ್ಲ. ಬೇಕಿದ್ದರೆ ಮೊಯ್ಲಿ ಅವರನ್ನು ನೀವೇ ಕೇಳಿಕೊಳ್ಳಿ ಎಂದರು.

ಕಾಂಟ್ರಾಕ್ಟ್ ಒಬ್ಬರಿಗೆ ಟಿಕೆಟ್ ಕೊಡಿಸುವ ವಿಚಾರ ಹಾಗೂ ಮೊಯ್ಲಿ ಮಗನಿಗೆ ಟಿಕೆಟ್ ತಪ್ಪಿಸುವ ವಿಚಾರವಾಗಿ ಟ್ವೀಟ್ ಮಾಡಿದ್ದಾರಾ ಎನ್ನುವ ಪ್ರಶ್ನೆಗೆ, ಯಾರಿಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಮೊಯ್ಲಿ ಅವರು ಹಿರಿಯ ನಾಯಕರಾಗಿದ್ದು, ಅವಶ್ಯಕತೆ ಬಿದ್ದರೆ ನಾನೇ ಅವರ ಜೊತೆ ಮಾತನಾಡುತ್ತೇನೆ. ವಿವಾದದಿಂದ ನನಗೇನು ಆಗಿಲ್ಲ. ನಾನು ಸಂತೋಷವಾಗಿಯೇ ಇದ್ದೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ವೀರಪ್ಪ ಮೊಯ್ಲಿ ಟ್ವೀಟ್ 10% ಕಮಿಷನ್ ಸರ್ಕಾರದ ಆರೋಪಕ್ಕೆ ಸಾಕ್ಷಿ : ಬಿಎಸ್‍ವೈ

ಟಿಕೆಟ್ ನಿರ್ಧಾರ ಆಗಿಲ್ಲ: ಮುಂಬರುವ ಚುನಾವಣೆಯಲ್ಲಿ ನನ್ನನ್ನು ಸೇರಿದಂತೆ ಯಾರಿಗೂ ಇನ್ನು ಟಿಕೆಟ್ ನಿರ್ಧಾರ ಆಗಿಲ್ಲ. ಟಿಕೆಟ್ ಸಂಬಂಧ ಸಭೆಗಳು ನಡೆಯುತ್ತಿವೆ. ನನ್ನ ಮಗ ಕೂಡಾ ಟಿಕೆಟ್ ಆಕಾಂಕ್ಷಿ. ಯಾವ ಕ್ಷೇತ್ರ ಅಂತ ಇನ್ನು ನಿರ್ಧಾರ ಆಗಿಲ್ಲ. ನನ್ನ ಹಾಗೂ ನನ್ನ ಮಗನ ಸ್ಪರ್ಧೆಯ ಕ್ಷೇತ್ರದ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರೋದು ಸುಳ್ಳು. ನನ್ನ ಹಾಗೂ ಮಗನ ಸ್ಪರ್ಧೆಯನ್ನ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.

Share This Article