ರಾಮನಗರ: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಪಕ್ಷಕ್ಕೋಸ್ಕರ ತ್ಯಾಗ ಮಾಡಿದ್ದಾರೆ, ಪಕ್ಷಕ್ಕೋಸ್ಕರ ಜೈಲಿಗೆ ಹೋಗಿ ಬಂದಿದ್ದಾರೆ. ಬೇರೆ ಲೀಡರ್‌ಗಳ ರೀತಿ ಬಿಜೆಪಿ ಜೊತೆ ರಾಜೀ ಮಾಡಿಕೊಂಡಿದ್ರೆ, ಇಷ್ಟೊತ್ತಿಗೆ ಎಲ್ಲಿರ್ತಿದ್ರೋ ಗೊತ್ತಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಅಸಮಾಧಾನ ಹೊರಹಾಕಿದ್ದಾರೆ.

ರಾಮನಗರದಲ್ಲಿ (Ramanagara) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಯಾವುದಕ್ಕೂ ರಾಜಿಯಾಗದೇ ಕಾಂಗ್ರೆಸ್ ನಲ್ಲೇ ಉಳಿದಿದ್ದಾರೆ. ಹಿಂದೆ ಸ್ವತಂತ್ರವಾಗಿ ಗೆದ್ದಾಗ ಜನತಾದಳ ಸರ್ಕಾರ ಇತ್ತು. ಆಗಲೂ ಎಲ್ಲೂ ಹೋಗದೇ ಕಾಂಗ್ರೆಸ್ ನಲ್ಲಿ (Congress) ಉಳಿದುಕೊಂಡ್ರು. ಹಾಗಾಗಿ ಹೈಕಮಾಂಡ್ ಗೆ ಮನವಿ ಮಾಡ್ತೀವಿ, ನಮ್ಮ ನಾಯಕರಿಗೂ ಅವಕಾಶ ಕೊಡಿ. ಡಿಕೆಶಿ ಸಿಎಂ ಆದ್ರೆ ನಮ್ಮ ಜಿಲ್ಲೆಯೂ ಅಭಿವೃದ್ಧಿ ಆಗುತ್ತೆ ಎನ್ನುವ ಸ್ವಾರ್ಥ ಇದೆ ನಮಗೆ ಎಂದು ಶಾಸಕರು ಹೇಳಿದ್ದಾರೆ.

ಇನ್ನೂ ಕೇಂದ್ರ ಸಚಿವ ಹೆಚ್‌ಡಿಕೆ ಹಾಗೂ ಜಿ. ಪರಮೇಶ್ವರ್ ಭೇಟಿ ವಿಚಾರ ಕುರಿತು ಮಾತನಾಡಿ, ಯಾವ ವಿಚಾರಕ್ಕೆ ಭೇಟಿ ಆಗಿದ್ದಾರೆ ಅಂತ ಗೊತ್ತಿಲ್ಲ. ಎಲ್ಲೋ ಸಿಕ್ಕಿದಾಗ ಮಾತನಾಡೋದು ಸಹಜ. ಮನೆಗೆ ಹೋಗಿ ಭೇಟಿ ಮಾಡಿದ್ರೆ ಅದಕ್ಕೆ ಒಂದು ಅರ್ಥ ಇದೆ. ಕಚೇರಿಯಲ್ಲಿ, ರೋಡಲ್ಲಿ, ಮದುವೆಲಿ ಸಿಕ್ಕಿದಾಗ ಮಾತಾಡೋದ್ರಲ್ಲಿ ವಿಶೇಷ ಏನಿಲ್ಲ ಎಂದು ತಿಳಿಸಿದ್ದಾರೆ.

