-ಜಲಚರ, ಜನ, ಜಾನುವಾರುಗಳ ಪ್ರಾಣಕ್ಕೆ ಕುತ್ತು
ರಾಯಚೂರು: ಜಿಲ್ಲೆಯ ಶಕ್ತಿನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಒಂದಿಲ್ಲೊಂದು ಅವಘಡಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಬಾರಿ ವಿಷಯುಕ್ತ ರಾಸಾಯನಿಕವನ್ನು ನೇರವಾಗಿ ನದಿಗೆ ಬಿಡುವ ಮೂಲಕ ಆರ್‍ಟಿಪಿಎಸ್ ಘೋರ ದುರಂತಕ್ಕೆ ಕಾರಣವಾಗಲು ಹೊರಟಿದೆ. ಬ್ಯಾರೆಲ್ ಗಟ್ಟಲೇ ಸೋರಿಕೆಯಾದ ರಾಸಾಯನಿಕ ಆಯಿಲನ್ನು ನದಿಗೆ ಬಿಟ್ಟಿದ್ದರಿಂದ ನದಿ ಪಾತ್ರದ ಹಳ್ಳಿ ಜನರಲ್ಲಿ ಭಯ ಹುಟ್ಟಿಸಿದೆ.
ಆರ್‍ಟಿಪಿಎಸ್ ಕೃಷ್ಣಾನದಿಗೆ ನೇರವಾಗಿ ರಾಸಾಯನಿಕ ವಸ್ತುಗಳನ್ನ ಬಿಡುವುದರಿಂದ ಸುತ್ತಮುತ್ತಲ ಹಳ್ಳಿ ಜನರಲ್ಲಿ ಚರ್ಮವ್ಯಾಧಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಈ ಹಿಂದೆ ವರದಿ ಪ್ರಸಾರ ಮಾಡಿತ್ತು. ವರದಿಗೆ ಸಾಕ್ಷಿ ಎಂಬಂತೆ ಪುನಃ ಆರ್‍ಟಿಪಿಎಸ್ ವಿಷಯುಕ್ತ ಆಯಿಲನ್ನು ನೇರವಾಗಿ ನದಿಗೆ ಬಿಟ್ಟಿದೆ. ವಿಷಯುಕ್ತ ಪದಾರ್ಥಗಳು ನದಿಗೆ ಸೇರುವುದರಿಂದ ಕುಡಿಯುವ ನೀರಿಗಾಗಿ ಕೃಷ್ಣೆಯನ್ನೇ ಅವಲಂಬಿಸಿರುವ ರಾಯಚೂರು ನಗರ ಸೇರಿ 32 ಗ್ರಾಮಗಳ ಜನ ಆತಂಕಕ್ಕೊಳಗಾಗಿದ್ದಾರೆ. ವಿದ್ಯುತ್ ಕೇಂದ್ರದ ಐದನೇ ಘಟಕದಲ್ಲಿ ಬಾಯ್ಲರ್ ಸ್ಟಾರ್ಟ್ ಅಪ್‍ಗೆ ಬಳಸುವ ಫರನೇಸ್ ಆಯಿಲ್ ಸೋರಿಕೆಯಾಗಿದ್ದು, ಕೂಡಲೇ ಇದನ್ನ ತಡೆಯದಿದ್ದರೆ ಜಲಚರ, ಜನ, ಜಾನುವಾರಗಳ ಮೇಲೆ ಕೆಟ್ಟಪರಿಣಾಮ ಬೀರಲಿದೆ.
ಕಲ್ಲಿದ್ದಲು ಕೊರತೆಯಿದ್ದಾಗ ಬಳಸುವ ಲೋ ಡೆನ್ಸಿಟಿ ಆಯಿಲ್ ಹಾಗೂ ಫರನೇಸ್ ಆಯಿಲ್ ಸಾಗಣೆಯಲ್ಲಿ ತಾಂತ್ರಿಕ ತೊಂದರೆಯಾಗಿ ಸಾಗಾಣಾ ಪೈಪ್ ಸಿಡಿದಿದೆ. ಇದರಿಂದ ಸೋರಿಕೆಯಾದ ಆಯಿಲ್ ಕಳೆದ ನಾಲ್ಕೈದು ದಿನಗಳಿಂದ ಆರ್‍ಟಿಪಿಎಸ್ ಸಿಬ್ಬಂದಿ ನೇರವಾಗಿ ನದಿಗೆ ಬಿಡುತ್ತಿದ್ದಾರೆ. ಈ ವಿಷಯ ತಿಳಿದು ಅಕ್ಕಪಕ್ಕದ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಇದರಿಂದ ಅಧಿಕಾರಿಗಳು ಕಾಲುವೆ ಮುಖಾಂತರ ಹೋಗುತ್ತಿರುವ ಆಯಿಲನ್ನು ಪುನಃ ಬ್ಯಾರೆಲ್‍ಗೆ ತುಂಬಿಸಲು ಮುಂದಾಗಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಸಾಕಷ್ಟು ಬಾರಿ ಈ ಬಗ್ಗೆ ಎಚ್ಚರಿಕೆ ನೋಟೀಸ್ ನೀಡಿದ್ದರೂ ಆರ್‍ಟಿಪಿಎಸ್ ಪದೇ ಪದೇ ಬೇಜವಾಬ್ದಾರಿತನ ಮೆರೆಯುತ್ತಿದೆ. ಒಟ್ಟಿನಲ್ಲಿ ತಪ್ಪಿತಸ್ಥ ಆರ್‍ಟಿಪಿಎಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ವಿಷ ಪದಾರ್ಥ ನದಿಗೆ ಸೇರದಂತೆ ಕೂಡಲೇ ಸೂಕ್ತ ಕ್ರಮಗಳನ್ನ ಸಂಬಂಧಪಟ್ಟವರು ತೆಗೆದುಕೊಳ್ಳಬೇಕಿದೆ.