ಹಾವೇರಿ: ವರದಾ ನದಿಯಲ್ಲಿ ಎತ್ತಿನ ಮೈತೊಳೆಯುತ್ತಿದ್ದ ವೇಳೆ ಆಯತಪ್ಪಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಇಬ್ಬರು ನೀರುಪಾಲಾದ ಘಟನೆ ಹಾವೇರಿ ತಾಲೂಕು ಹಂದಿಗನೂರ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಗಳನ್ನು ಪರಮೇಶಪ್ಪ ಕಮ್ಮಾರ (62) ಮತ್ತು ಪ್ರಶಾಂತ ಕೊಂಚಿಗೇರಿ (16) ವರ್ಷ ಎಂದು ಗುರುತಿಸಲಾಗಿದೆ. ಎತ್ತಿನ ಮೈತೊಳೆಯಲು ಪ್ರಶಾಂತ ಸಂಬಂಧಿಕರ ಜೊತೆ ನದಿಗೆ ತೆರಳಿದ್ದ. ಆದರೆ ಆಯತಪ್ಪಿ ನದಿಗೆ ಬಿದ್ದು ಪ್ರಶಾಂತ ನೀರಲ್ಲಿ ಮುಳುಗುತ್ತಿದ್ದನ್ನು ಕಂಡು ಆತನ ರಕ್ಷಣೆಗೆ ನೀರಿಗೆ ಇಳಿದಿದ್ದ ಪರಮೇಶಪ್ಪ ಕಮ್ಮಾರ ಸಹ ನದಿ ನೀರಿನ ರಭಸಕ್ಕೆ ಇಬ್ಬರು ಕೊಚ್ಚಿ ಹೋಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರಿಂದ ಶೋಧಕಾರ್ಯ ನಡೆಸುತ್ತಿದ್ದಾರೆ. ಸದ್ಯ ಪರಮೇಶಪ್ಪ ಕಮ್ಮಾರ ಅವರ ಮೃತದೇಹ ಸಿಕ್ಕಿದ್ದು, ಪ್ರಶಾಂತನ ಮೃತದೇಹಕ್ಕೆ ಶೋಧ ಕಾರ್ಯ ಮುಂದುವರಿದಿದೆ. ಅಲ್ಲದೆ ಹಾವೇರಿ ತಹಶೀಲ್ದಾರ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.