– ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಎಎಸ್‍ಐ ಕಿರಿಕ್
ಹಾವೇರಿ: ಕೊರೊನಾ ಚೆಕ್ ಪೋಸ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕನಿಗೆ ಸಂಚಾರಿ ಠಾಣೆ ಎಎಸ್‍ಐ ಒಬ್ಬರು ಅವಾಚ್ಯ ಪದಗಳಿಂದ ನಿಂದಿಸಿ, ದಂಡ ಹಾಕಿದ ಘಟನೆ ಹಾವೇರಿ ನಗರದ ಚನ್ನಮ್ಮ ವೃತ್ತದಲ್ಲಿ ನಡೆದಿದೆ.
ಹಿರಿಯ ಆರೋಗ್ಯ ಸಹಾಯಕ ಮಂಜುನಾಥ ಹೊನ್ನಾರಗರ ಅವರು ಸೋಮವಾರ ಸಂಜೆ ನಗರದ ಆರ್‌ಟಿಓ ಕಚೇರಿ ಬಳಿ ಇರುವ ಕೊರೊನಾ ಚೆಕ್ ಪೋಸ್ಟ್‌ನಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಆಗುತ್ತಿದ್ದರು. ಈ ವೇಳೆ ಸಂಚಾರಿ ಠಾಣೆ ಎಎಸ್‍ಐ ರಾಜೇಶ್ ಸಂಗೊಳ್ಳಿ ಎಂಬವರು ಆರೋಗ್ಯ ಇಲಾಖೆ ಸಿಬ್ಬಂದಿ ಮಂಜುನಾಥ ಬೈಕ್ ತಡೆದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
Advertisement
Advertisement
ಅಷ್ಟಕ್ಕೆ ಸುಮ್ಮನಾಗದ ರಾಜೇಶ್ ಸಂಗೊಳ್ಳಿ ಅವರು ಧಮ್ಕಿ ಹಾಕಿ ಒಂದು ಸಾವಿರ ರೂ. ಪಡೆದು ಕೇವಲ 500 ರೂ. ರಸೀದಿ ಕೊಟ್ಟು ಕಳಿಸಿದ್ದಾರಂತೆ. ಇದರಿಂದ ನೊಂದ ಆರೋಗ್ಯ ಇಲಾಖೆ ಸಿಬ್ಬಂದಿ ಮಂಜುನಾಥ, ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದ ಮೂಲಕ ಎಎಸ್‍ಐ ಸಂಗೊಳ್ಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.