ಹಾವೇರಿ: ಗುತ್ತಿಗೆದಾರನನ್ನು (Contractor) ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯ ಮನೆಗೆ ಬೆಂಕಿ ಹಚ್ಚಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ ಘಟನೆ ಶಿಗ್ಗಾಂವಿಯಲ್ಲಿ (Shiggaon) ನಡೆದಿದೆ.
ಪ್ರಕರಣ ಎ-1 ಆರೋಪಿ ನಾಗರಾಜ್ ಸವದತ್ತಿ ಮನೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಇದರಿಂದ ಮನೆಗೆ ಸಂಪೂರ್ಣ ಹಾನಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಈ ಘಟನೆ ನಡೆದಿದೆ. ಇದರಿಂದ ಆರೋಪಿಯ ಮನೆಯ ಸದಸ್ಯರು ಬಚಾವ್ ಆಗಿದ್ದಾರೆ. ಇದನ್ನೂ ಓದಿ: ಡಾಬಾಗೆ ನುಗ್ಗಿ ಮೂವರನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು
ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಎಂಬವರನ್ನು ಮಂಗಳವಾರ (ಜೂ.24) ಹಾಡಹಗಲೇ ಮಾರಕಾಸ್ತ್ರಗಳಿಂದ ಹೊಡೆದು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಹತ್ಯೆಗೆ ಆರೋಪಿ ನಾಗರಾಜ್ ಸಂಚು ರೂಪಿಸಿದ್ದ ಎನ್ನಲಾಗಿದೆ. ಸ್ಥಳೀಯರು ಕೃತ್ಯದ ವಿಡಿಯೋ ಮಾಡಿದ್ದರು. ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ವಿಡಿಯೋದಲ್ಲಿ ನಾಗರಾಜ್ ಸವದತ್ತಿ, ಹನುಮಂತ, ಅಶ್ರಪ್, ಸುದೀಪ್ ಮತ್ತು ಸುರೇಶ್ ಹತ್ಯೆ ಮಾಡಿರುವುದು ಸೆರೆಯಾಗಿತ್ತು. ಹತ್ಯೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಆಸ್ತಿ ವಿಚಾರದಲ್ಲಿ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ಈ ಐವರ ವಿರುದ್ಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರು ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಇದನ್ನೂ ಓದಿ: ಬಾತ್‌ರೂಮಲ್ಲೇ ವ್ಯಕ್ತಿಯ ಬರ್ಬರ ಹತ್ಯೆ – ಕೊಲೆ ಫೋಟೋ ಇನ್ಸ್ಟಾದಲ್ಲಿ ಹಾಕಿ ‘ಜಾಲಿ ಜಾಲಿ’ ಎಂದು ಬರೆದ ಆರೋಪಿ
 
					

 
		 
		 
		 
		 
		 
		 
		 
		 
		