ಹಿಂದೂ ಯುವತಿ ಹತ್ಯೆ ಕೇಸ್‌ – ಸ್ವಾತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

Public TV
1 Min Read
haveri swathi

ಹಾವೇರಿ: ನರ್ಸ್‌ ಆಗಿದ್ದ ಸ್ವಾತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.

ಸಿಎಂಗೆ ಭೇಟಿಯಾಗಿ ಸಚಿವ ಶಿವಾನಂದ ಪಾಟೀಲ್ ಆದೇಶ ಮಾಡಿಸಿದ್ದಾರೆ. ರಟ್ಟಿಹಳ್ಳಿ ತಾಲೂಕು ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ ಈಚೆಗೆ ಹತ್ಯೆಗೀಡಾಗಿದ್ದರು. ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಇಂದು ಶಾಸಕ ಯು.ಬಿ. ಬಣಕಾರ್ ಅವರೊಂದಿಗೆ ಶಿವಾನಂದ್‌ ಪಾಟೀಲ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು.

ಸ್ವಾತಿ ಹತ್ಯೆ ಪ್ರಕರಣ ವಿವರಿಸಿ ಪರಿಹಾರ ಬಿಡುಗಡೆ ಮಾಡಲು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಸಂತ್ರಸ್ತೆ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಸ್ವಾತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಯಾವುದೇ ಕಾರಣಕ್ಕೂ ಅಪರಾಧಿಗಳು ಶಿಕ್ಷೆಯಿಂದ ಪಾರಾಗುವ ಅವಕಾಶ ನೀಡುವುದಿಲ್ಲ. ಹತ್ಯೆಗೀಡಾದ ಸ್ವಾತಿ ಅವರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧವಾಗಿದೆ. ಹತ್ಯೆ ಮಾಡಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು. ಪ್ರಕರಣವನ್ನು ದುರ್ಬಲಗೊಳಿಸದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಿಎಂ ಭರವಸೆ ನೀಡಿದ್ದಾರೆ.

ರಾಣೆಬೆನ್ನೂರು ಖಾಸಗಿ ಆಸ್ಪತ್ರೆಯಲ್ಲಿ ಸ್ವಾತಿ ಕೆಲಸ ಮಾಡಿಕೊಂಡಿದ್ದರು. ಮಾ.2 ರಂದು ಕೆಲಸಕ್ಕೆ ಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ, ಕುಟುಂಬದವರು ನಾಪತ್ತೆ ದೂರು ದಾಖಲು ಮಾಡಿದ್ದರು.
ಮಾ.6 ರಂದು ರಾಣೆಬೆನ್ನೂರು ತಾಲೂಕಿನ ಪತ್ಯಾಪುರ ಬಳಿ ತುಂಗಭದ್ರಾ ನದಿ ದಡದಲ್ಲಿ ಶವ ಪತ್ತೆಯಾಗಿತ್ತು.

ಸ್ವಾತಿ ಅವರನ್ನು ಹತ್ಯೆ ಮಾಡಿ ನದಿಗೆ ಎಸೆಯಲಾಗಿದೆ ಎನ್ನುವುದು ದೃಢಪಟ್ಟ ಹಿನ್ನೆಲೆ, ದೂರು ದಾಖಲಿಸಿಕೊಂಡ ಪೊಲೀಸರು, ನಯಾಜ್‌, ದುರ್ಗಾಚಾರಿ, ವಿನಯ್‌ ಮೂವರು ಆರೋಪಿಗಳನ್ನು ಬಂಧಿಸಿದ್ದರು.

Share This Article