ಹಾವೇರಿ: ಪುಲ್ವಾಮಾದಲ್ಲಿ ನಡೆದ ಸರ್ಚ್ ಅಪರೇಶನ್ ವೇಳೆ ಉಗ್ರರ ದಾಳಿಯಿಂದಾಗಿ ಗಾಯಗೊಂಡಿದ್ದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಯೋಧ ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದರು. ಇಂದು ಅವರ ಅಂತ್ಯಕ್ರಿಯೆ ನೆರವೇರಿದ್ದು, ಯೋಧ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ 26 ವರ್ಷದ ಶಿವಲಿಂಗೇಶ್ವರ ಪಾಟೀಲ ಏಳು ವರ್ಷಗಳ ಹಿಂದೆ ದೇಶಸೇವೆಗೆ ಸೇರಿದ್ದರು. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೇ 14ರಂದು ಪುಲ್ವಾಮಾದ ಸರ್ಚ್ ಅಪರೇಶನ್ ನಲ್ಲಿ ಭಾಗವಹಿಸಿದ್ದ ಶಿವಲಿಂಗೇಶ್ವರ ಮೇಲೆ ಉಗ್ರರು ದಾಳಿ ಮಾಡಿದ್ದರು. ಉಗ್ರರ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಶಿವಲಿಂಗೇಶ್ವರ ಅವರನ್ನು ದೆಹಲಿಯ ಆರ್.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಶಿವಲಿಂಗೇಶ್ವರ ಮೇ 25ರಂದು ಮೃತಪಟ್ಟಿದ್ದರು.
Advertisement
Advertisement
ಶಿವಲಿಂಗೇಶ್ವರ ಅವರು ಸಾವಿನ ನಂತರವೂ ಸಾರ್ಥಕತೆ ಮೆರೆದಿದ್ದಾರೆ. ಏಕೆಂದರೆ ಶಿವಲಿಂಗೇಶ್ವರ ಸೈನ್ಯದಲ್ಲಿದ್ದಾಗ ಸಾವಿನ ನಂತರ ಗೆಳೆಯರ ಬಳಿ ನೇತ್ರದಾನದ ಬಗ್ಗೆ ಹೇಳಿಕೊಂಡಿದ್ದರು. ಅದರಂತೆಯೇ ಶಿವಲಿಂಗೇಶ್ವರ ಅವರು ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಕಣ್ಣಿಲ್ಲದವರಿಗೆ ಕಣ್ಣಾಗಿದ್ದಾರೆ.
Advertisement
Advertisement
ಶಿವಲಿಂಗೇಶ್ವರ ಅವರ ಪಾರ್ಥಿವ ಶರೀರ ಇಂದು ಬೆಳಗ್ಗೆ ಹಾವೇರಿ ನಗರದ ನಿವಾಸಕ್ಕೆ ಆಗಮಿಸಿತ್ತು. ಕುಟುಂಬಸ್ಥರು ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಗರದಲ್ಲಿ ಮೆರವಣಿಗೆ ಮಾಡಿದ ನಂತರ ಯೋಧ ಶಿವಲಿಂಗೇಶ್ವರ ಹುಟ್ಟೂರು ಗುಂಡೇನಹಳ್ಳಿ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಯಿತು. ಗ್ರಾಮದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅದಾದ ಮೇಲೆ ಹುತಾತ್ಮ ಯೋಧ ಹುಟ್ಟಿದ ಮನೆಗೆ ಒಯ್ದು ಪೂಜೆ ಸಲ್ಲಿಸಿ ನಂತರ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಶಾಸಕರು, ಮಾಜಿ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ನೂರಾರು ಜನರು ಆಗಮಿಸಿ ಪಾರ್ಥಿವ ಶರೀರಕ್ಕೆ ಹೂಗುಚ್ಛವಿರಿಸಿ ಅಂತಿಮ ದರ್ಶನ ಪಡೆದುಕೊಂಡರು.
ಹುತಾತ್ಮ ಯೋಧ ಶಿವಲಿಂಗೇಶ್ವರ ಸಾವು ಗ್ರಾಮದ ಮಕ್ಕಳು, ಮಹಿಳೆಯರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿತ್ತು. ಪ್ರತಿಯೊಬ್ಬರು ಸೆಲ್ಯೂಟ್ ಮಾಡುತ್ತಾ “ಶಿವಲಿಂಗೇಶ್ವರ ಅಮರ್ ರಹೇ, ಅಮರ್ ರಹೇ” ಎಂದು ಜೈಕಾರ ಹಾಕುತ್ತಿದ್ದರು. ಹುತಾತ್ಮ ಯೋಧನ ತಾಯಿ ಸಹ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಬೇಕು ಎಂದು ಮನವಿ ಮಾಡಿಕೊಂಡರು.