ಹಾವೇರಿ: ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿಯೊಬ್ಬ ಪಾಪಪ್ರಜ್ಞೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಣೇಬೆನ್ನೂರು ತಾಲೂಕಿನ ಹಣಸೀಕಟ್ಟಿ ಗ್ರಾಮದ ಬಳಿ ನಡೆದಿದೆ.
ರಾಣೇಬೆನ್ನೂರು ತಾಲೂಕಿನ ಕೂನಬೇವು ತಾಂಡಾದ ಚಂದ್ರಪ್ಪ ಕಂಬಳಿ (36) ಆತ್ಮಹತ್ಯೆ ಮಾಡಿಕೊಂಡ ಪತಿ. ಚಂದ್ರಪ್ಪ ಎರಡು ದಿನಗಳ ಹಿಂದೆ ಪತ್ನಿ ಶೇಖವ್ವಳನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದು, ತಲೆಮರೆಸಿಕೊಂಡು ಓಡಾಡುತ್ತಿದ್ದ. ಆದರೆ ಇಂದು ಹುಣಸೀಕಟ್ಟಿ ಗ್ರಾಮದ ಸಮೀಪವಿರುವ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಏನಿದು ಪ್ರಕರಣ?:
ಮೃತ ಚಂದ್ರಪ್ಪ ಟಾಟಾ ಏಸ್ ವಾಹನ ಓಡಿಸುತ್ತಿದ್ದ ಹಾಗೂ ಕುಡಿತದ ಚಟಕ್ಕೆ ದಾಸನಾಗಿದ್ದ. ಕುಡಿತದ ಮತ್ತಿನಲ್ಲಿ ಆಗಾಗ ಪತ್ನಿಯ ಜೊತೆ ಜಗಳ ಮಾಡುತ್ತಿದ್ದ. ಮೂರ್ನಾಲ್ಕು ಬಾರಿ ಗ್ರಾಮದ ಮುಖಂಡರು ರಾಜಿ ಪಂಚಾಯ್ತಿ ಸಹ ಮಾಡಿದ್ದರು. ಆದರೂ ಚಂದ್ರಪ್ಪ ಸುಧಾರಣೆ ಆಗಿರಲಿಲ್ಲ. ಅಷ್ಟೇ ಅಲ್ಲದೇ 3,4 ಬಾರಿ ಪತ್ನಿ ಶೇಖವ್ವಳ ಮೇಲೆ ಹಲ್ಲೆಗೆ ಯತ್ನಿಸಿ ವಿಫಲನಾಗಿದ್ದ. ಆದರೆ ಬುಧವಾರ ರಾತ್ರಿ ಮನೆಗೆ ಬಂದ ಪತಿ ಚಂದ್ರಪ್ಪ ಶೇಖವ್ವಳನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದ. ನಂತರ ಅಲ್ಲಿಂದ ಪರಾರಿಯಾಗಿದ್ದ.
ಶೇಖವ್ವಳ ಅಕ್ಕಪಕ್ಕದಲ್ಲಿ ಮಗ ಮತ್ತು ಸಂಬಂಧಿಕರು ಮಲಗಿಕೊಂಡಿದ್ದರು. ಆದರೆ ವಿದ್ಯುತ್ ಸಂಪರ್ಕ ಕಡಿತಗೊಂಡು ಮನೆಯಲ್ಲಿ ಕತ್ತಲೆ ಆವರಿಸಿತ್ತು. ಒಮ್ಮೆ ಮನೆಗೆ ಬಂದು ಶೇಖವ್ವ ಮಲಗಿದ್ದನ್ನ ಪತಿ ಚಂದ್ರಪ್ಪ ನೋಡಿಕೊಂಡು ಹೋಗಿದ್ದನು. 2ನೇ ಬಾರಿಗೆ ಬಂದು ಅಕ್ಕಪಕ್ಕದಲ್ಲಿ ಮಲಗಿದವರಿಗೆ ಗೊತ್ತಾಗದಂತೆ ಹತ್ಯೆ ಮಾಡಿದ್ದ. ಪತಿಯ ಹೊಡೆತಕ್ಕೆ ಪತ್ನಿ ಶೇಖವ್ವ ನರಳಾಡುತ್ತಿದ್ದನ್ನು ಕಂಡು ಅಕ್ಕಪಕ್ಕ ಮಲಗಿದ್ದ ಸಂಬಂಧಿಕರು ಎಚ್ಚರಗೊಂಡಿದ್ದರು. ಆ ಹೊತ್ತಿಗಾಗಲೇ ಚಂದ್ರಪ್ಪ ಸ್ಥಳದಿಂದ ಕಾಲ್ಕಿತ್ತಿದ್ದ.
ಅಪಘಾತ:
ಈ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣಾ ಪೊಲೀಸರು ಬಂದು ಪರಿಶೀಲನೆ ನಡೆಸಿ ಆರೋಪಿ ಪತ್ತೆಗಾಗಿ ಜಾಲ ಬೀಸಿದ್ದರು. ಪಿಎಸ್‍ಐ ಸುನೀಲ್‍ಕುಮಾರ್ ಮತ್ತು ಸಿಬ್ಬಂದಿ ಆರೋಪಿ ಚಂದ್ರಪ್ಪನ ಸುಳಿವು ಹಿಡಿದುಕೊಂಡು ಬಂಧಿಸಲು ತೆರಳುತ್ತಿದ್ದರು. ಇದೇ ವೇಳೆ ವೇಗದಲ್ಲಿ ತೆರಳುವಾಗ ನಗರದ ಹೊರವಲಯದಲ್ಲಿರುವ ಮಾಗೋಡ ರಸ್ತೆಯಲ್ಲಿ ಎದುರಿಗೆ ಬರುತ್ತಿದ್ದ ಸ್ಕೂಟಿಗೆ ಪೊಲೀಸ್ ಜೀಪ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಸ್ಕೂಟಿಯಲ್ಲಿದ್ದ ನಗರದ ಖಾಸಗಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸವಿತಾ ಶಶಿಮಠ (26) ಮೃತಪಟ್ಟಿದ್ದಳು.
ಸವಿತಾ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದವಳು. ಕೆಲವು ವರ್ಷಗಳಿಂದ ರಾಣೇಬೆನ್ನೂರು ನಗರದಲ್ಲಿ ಕೆಲಸ ಮಾಡಿಕೊಂಡಿದ್ದಳು. ಪಿಎಸ್‍ಐ ಸುನೀಲ್ ಕುಮಾರ್ ಇದ್ದ ಜೀಪನ್ನು ಚಾಲಕ ಗಣೇಶ್ ಓಡಿಸುತ್ತಿದ್ದನು. ಅಪಘಾತದ ನಂತರ ಪೊಲೀಸರು ಒಂದು ಕ್ಷಣ ಗಾಬರಿ ಆಗಿದ್ದು, ಆರೋಪಿ ಪತ್ತೆಗೆ ಹೋಗಿದ್ದವರೇ ಆರೋಪಿಗಳಾಗಿದ್ದ ಸ್ಥಿತಿ ನಿರ್ಮಾಣವಾಗಿತ್ತು.