ಹಾನಗಲ್(ಹಾವೇರಿ): ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಪಪ್ರಚಾರ ಮಾಡುವುದನ್ನು ಬಿಟ್ಟು ಡಿ.ಕೆ ಶಿವಕುಮಾರ್ ಜೈಲಿಗೆ ಯಾಕೆ ಹೋದರು..? ಐಟಿ ದಾಳಿ ಯಾಕೆ ಆಯಿತು..? ಎಂಬುದನ್ನು ಜನತೆಗೆ ತಿಳಿಸಲಿ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸವಾಲೆಸೆದರು.
ಹಾನಗಲ್ ನಲ್ಲಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯಡಿಯೂರಪ್ಪ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂದಾದರೆ ಲೋಕಾಯುಕ್ತ ಇದೆ, ಐಟಿ ಇದೆ. ಲಿಖಿತವಾಗಿ ದೂರು ಕೊಡಲಿ, ಆದರೆ ಯಾವ ದೂರು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
Advertisement
Advertisement
ಸೋಲುವುದು ಗೊತ್ತಾಗುತ್ತಿದ್ದಂತೆ ಈ ರೀತಿ ಗಿಮಿಕ್ ಮಾಡ್ತಾರೆ. ಗೃಹ ಸಚಿವರಾಗಿ, ನೀರಾವರಿ ಸಚಿವರಾಗಿ ಈಗ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರ ಮೇಲೆ ಯಾವುದಾದರೂ ಆರೋಪವಿದೆಯೇ ಜನರಿಗೆ ಒಳ್ಳೆಯ ಕೆಲಸ ಮಾಡಬೇಕೆಂದು ಬಂದಿದ್ದಾರೆ. ಮೋದಿ ಅವರಿಗೆ ವಿಶ್ವದಲ್ಲಿ ಒಳ್ಳೆ ಹೆಸರಿದೆ. ಭಾರತಕ್ಕೆ ಹೆಸರು ತಂದುಕೊಟ್ಟವರು ಎಂದರು.
Advertisement
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಣ ಹಂಚಿಕೆ ಮಾಡಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಬಿಜೆಪಿ ಹಣ ಹಂಚುವ ಕೆಲಸ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪ್ರಕಾರ ಮತಯಾಚಿಸುತ್ತೇವೆ ಹೊರತು ಮತದಾರರಿಗೆ ಹಣ ಹಂಚುವ ಕೆಲಸ ಮಾಡಿಲ್ಲ. ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಬ್ಬರಿಗೊಬ್ಬರಿಗೆ ಬಗೆಹರಿಯುತ್ತಿಲ್ಲ. ಅವರದ್ದು ಬಗೆಹರಿಸಿಕೊಳ್ಳಲು ಹೊಸ ಹೊಸದನ್ನು ಹುಡುಕುತ್ತಾರೆ ಎಂದು ಹೇಳಿದರು.
Advertisement
ಹಾನಗಲ್ ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ಅವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಹಲವು ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಲು ಹುಮ್ಮಸ್ಸು ಹೊಂದಿದ್ದಾರೆ. ಪಕ್ಷದ ಪರ ಮನೆಮನೆ ಪ್ರಚಾರ ಮಾಡಲಾಗುವುದು. ಮುಖ್ಯಮಂತ್ರಿಗಳು ಮತ್ತು ಸಚಿವ ಬಿ.ಸಿ.ಪಾಟೀಲ್ ಅವರು ಇದೇ ಜಿಲ್ಲೆಯವರಾದ್ದರಿಂದ ಬಿಜೆಪಿ ಗೆಲುವು ಸಾಧಿಸಲಿದೆ. ಜನರು ಸಹ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದು ಅದನ್ನು ಮುಖ್ಯಮಂತ್ರಿಗಳು ಈಡೇರಿಸಲಿದ್ದಾರೆ ಎಂದು ಭರವಸೆ ನೀಡಿದರು.
ಇದೇ ವೇಳೆ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನಲ್ಲಿ ಜಿಲ್ಲೆಯ ಎಲ್ಲರಿಗೂ ಸಾಲ ನೀಡದೆ ಕೇವಲ ಎರಡು ಮೂರು ಕ್ಷೇತ್ರದವರಿಗಷ್ಟೇ ಸಾಲ ನೀಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ಕುರಿತು ಸಭೆ ಕೂಡ ಮಾಡಲಾಗಿದೆ. ಕೋಲಾರ ಡಿಸಿಸಿ ಬ್ಯಾಂಕಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ
ತುಮಕೂರು ಡಿಸಿಸಿ ಬ್ಯಾಂಕ್ ನಲ್ಲಿ ಕೂಡ ಸರಿಯಾಗಿ ಸಾಲ ಕೊಡುತ್ತಿಲ್ಲ ಎಂದು ದೂರು ಬಂದಿದ್ದು ತನಿಖೆ ಮಾಡಲಾಗುತ್ತಿದೆ. ಉಳಿದಂತೆ 19 ಡಿಸಿಸಿ ಬ್ಯಾಂಕ್ ಗಳು ಅಲ್ಪಾವಧಿ, ದೀರ್ಘಾವಧಿ ಸಾಲ ನೀಡುತ್ತಿವೆ. ಎಸ್ ಸಿ, ಎಸ್ ಟಿ, ಒಬಿಸಿ ಸೇರಿದಂತೆ ಎಲ್ಲಾ ಜನಾಂಗದವರಿಗೆ ಸಾಲ ನೀಡಬೇಕೆಂದು ಹೇಳಲಾಗಿದೆ. 20,810 ಕೋಟಿ ರೂ. ಕೃಷಿ ಸಾಲವನ್ನು 30.86 ಲಕ್ಷ ರೈತರಿಗೆ ವಿತರಿಸುವ ಗುರಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಟೀಲ್ ಆರೋಪಕ್ಕೆ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಸಾಕ್ಷ್ಯ ನೀಡಿದ ಬಿಜೆಪಿ
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಬುಧವಾರ ಹಾನಗಲ್, ಆಡರು ಸೇರಿದಂತೆ ನಾನಾಕಡೆ ಶಿವರಾಜ ಸಜ್ಜನ ಪರವಾಗಿ ಪ್ರಚಾರದಲ್ಲಿ ತೊಡಗಿಕೊಂಡು ಮತಯಾಚಿಸಿದರು. ಹಿರೆಹುಳ್ಳಾಳ ಗ್ರಾಮ ಪಂಚಾಯತ್ ನ ತಮರಿಕೊಪ್ಪ, ಬಾಳಂಬೀಡ ಗ್ರಾಮದಲ್ಲಿ ಮುಖಂಡರ ಸಭೆ ನಡೆಸಿದರು. ಇದಕ್ಕೂ ಮುನ್ನ ವಿರಕ್ತಮಠಕ್ಕೆ ಭೇಟಿ ನೀಡಿ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿ, ಮುತ್ತಿನಕಂತಿ ಮಠ, ಶಿವಬಸವ ಮಹಾಸ್ವಾಮೀಜಿಗಳನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಬ್ಯಾಡಗಿ ಶಾಸಕರು, ಯುವ ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ್ ಕುಮಾರ್ ಕೆ.ಸಿ. ಹಾಗೂ ಪ್ರಮುಖ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.