ಹಾವೇರಿ: ಕರು ತಿನ್ನಲು ಬಂದು ರೇಷ್ಮೆ ಮನೆಯಲ್ಲಿ ಬಂಧಿಯಾಗಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದುಕೊಂಡಿದ್ದಾರೆ.
ಶನಿವಾರ ರಾತ್ರಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಒಡೆರಾಯನಹಳ್ಳಿ ಗ್ರಾಮದ ಶಿವಾನಂದಪ್ಪ ಬಣಕಾರ ಎಂಬ ರೈತನ ರೇಷ್ಮೆ ಮನೆಗೆ ಚಿರತೆ ಪ್ರವೇಶ ಮಾಡಿತ್ತು. ಚಿರತೆ ರೇಷ್ಮೆ ಮನೆ ಹೊಕ್ಕಿದ್ದನ್ನ ಗಮನಿಸಿದ್ದ ಸ್ಥಳೀಯ ರೈತರು ಹೊರಗಡೆಯಿಂದ ಬಾಗಿಲು ಹಾಕಿದ್ದರು.
ನಂತರ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು. ಬೆಳಗಿನ ಜಾವ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರೇಷ್ಮೆ ಮನೆಯಲ್ಲಿ ಬಂಧಿಯಾಗಿದ್ದ ಚಿರತೆಯನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲು ತೆಗೆದುಕೊಂಡು ಹೋಗಿದ್ದಾರೆ. ಕೆಲವು ದಿನಗಳಿಂದ ಗ್ರಾಮದ ರೈತರ ಬಳಿ ಚಿರತೆ ಓಡಾಡಿಕೊಂಡಿದ್ದರಿಂದ ಆತಂಕಕ್ಕೆ ಸಿಲುಕಿದ್ದ ಗ್ರಾಮದ ರೈತರು, ಈಗ ಚಿರತೆ ಸೆರೆ ಸಿಕ್ಕು ಊರಿಂದ ಹೋಗಿರೋದ್ರಿಂದ ನಿಟ್ಟುಸಿರು ಬಿಟ್ಟಿದ್ದಾರೆ.