ಹಾವೇರಿ: ಬಿಟ್ಟು ಬಿಡದೇ ಸುರಿಯುವ ಮಳೆಯಿಂದಾಗಿ ರಾಜ್ಯದಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಮಳೆರಾಯ ಕೃಪೆ ತೋರದ ಪರಿಣಾಮ ರೈತರು ಮಳೆಗಾಗಿ ಹೋಳಿಗೆ ಪೂಜೆ ನೆರವೇರಿಸಿದ್ದಾರೆ.
ರಾಜ್ಯದ ಹಲವು ಕಡೆ ಮಳೆ ನಿರಂತರವಾಗಿ ಸುರಿದ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳ, ಜಲಾಶಯಗಳು ತುಂಬಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಜಿಲ್ಲೆಯ ರೈತರು ಮಳೆಗಾಗಿ ಕುಂತ್ರೂ, ನಿಂತ್ರೂ ಮಳೆರಾಯನನ್ನೇ ನೆನೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಪ್ಯಾಟಿಬಸವೇಶ್ವರ ದೇವಸ್ಥಾನಕ್ಕೆ ವಿಭಿನ್ನ ರೀತಿಯಲ್ಲಿ ಬಸವೇಶ್ವರನಿಗೆ ಹೋಳಿಗೆ ಪೂಜೆ ಮಾಡುವ ಮೂಲಕ ವರುಣನಿಗಾಗಿ ಪ್ರಾರ್ಥಿಸಿದ್ದಾರೆ.
ಪ್ಯಾಟಿ ಬಸವೇಶ್ವರನಿಗೆ 150 ಹೋಳಿಗೆಗಳನ್ನ ಮೂರ್ತಿಗೆ ಮೆತ್ತಿ ಪೂಜೆ ಸಲ್ಲಿಸಿದ್ದಾರೆ. ಈ ಹೋಳಿಗೆ ಅಭಿಷೇಕಕ್ಕೆ 25 ಕೆ.ಜಿ ಬೆಲ್ಲ, 15 ಕೆ.ಜಿ ಮೈದಾಹಿಟ್ಟು, 15 ಕೆ.ಜಿ ಕಡಲೆ ಬೇಳೆ ಮತ್ತು 5 ಕೆ.ಜಿ ಎಣ್ಣೆಯಿಂದ ಹೋಳಿಗೆ ತಯಾರಿಸಿ ದೇವರಿಗೆ ಅರ್ಪಿಸಿದ್ದಾರೆ.
ಮಳೆ ಬಾರದೇ ಇದ್ದಾಗ ಪ್ಯಾಟಿ ಬಸವೇಶ್ವರನಿಗೆ ಹೋಳಿಗೆ ಪೂಜೆ ಮಾಡಿದರೆ ಮಳೆ ಬರುತ್ತದೆ ಎಂದು ನಂಬಿಕೆ ಇದೆ. ಹೀಗಾಗಿ ಪೂಜೆಯನ್ನು ಹಾವೇರಿ ರೈತರು ಕೈಗೊಂಡಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ವರುಣನ ಅವಕೃಪೆಯಾದಾಗ ರೈತರು ಹೋಳಿಗೆ ಪೂಜೆ ಮಾಡಿದ್ದರಿಂದ ಮಳೆ ಬಂದು ರೈತರ ಬದುಕು ಹಸನಾಗಿತ್ತು. ಹೀಗಾಗಿ ರೈತರು ಮತ್ತೆ ಬಸವೇಶ್ವರನಿಗೆ ಹೋಳಿಗೆ ಪೂಜೆ ಮಾಡೋ ಮೂಲಕ ವರುಣನ ಮೊರೆ ಹೋಗಿದ್ದಾರೆ.