ಹಾವೇರಿ: ರಾಜ್ಯದಲ್ಲಿ ಲೋಕ ಸಮರದ ಕಾವು ಬಿರುಸುಗೊಂಡಿದೆ. ಬುಧವಾರವಷ್ಟೇ ಕಲಬುರಗಿಯಲ್ಲಿ ಪ್ರಧಾನಿ ಪ್ರಚಾರದ ಕಹಳೆ ಮೊಳಗಿಸಿದ್ದರು. ಇಂದು ಹಾವೇರಿಯಲ್ಲಿ ರಾಹುಲ್ ಪರಿವರ್ತನಾ ಯಾತ್ರೆ ಮೂಲಕ ಕಾಂಗ್ರೆಸ್ ಪಾಂಚಜನ್ಯ ಮೊಳಗಿಸಲಿದ್ದಾರೆ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಇಂದು ಕಾಂಗ್ರೆಸ್ ಮಹಾ ಸಮಾವೇಶಕ್ಕೆ ಸಾಕ್ಷಿಯಾಗಲಿದೆ. ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿರುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮೊದಲಬಾರಿಗೆ ರಾಜ್ಯದಲ್ಲಿ ಪ್ರಚಾರದ ರಣಕಹಳೆ ಮೊಳಗಿಸಲಿದ್ದಾರೆ.
Advertisement
Advertisement
ಸಮಾವೇಶದ ಹಿನ್ನೆಲೆಯಲ್ಲಿ ಹಾವೇರಿ ಸಕಲ ರೀತಿಯಿಂದ ಸಜ್ಜುಗೊಂಡಿದೆ. ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಎಲ್ಲೆಲ್ಲೂ ಕಾಂಗ್ರೆಸ್ ಬಾವುಟಗಳು ರಾರಾಜಿಸ್ತಿವೆ. ಸಮಾವೇಶ ನಡೆಯೋ ಮೈದಾನದ ಪಕ್ಕದಲ್ಲೇ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್ ಇದೆ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ರಾಹುಲ್ ಆಗಮನ ಕಾರ್ಯಕರ್ತರಿಗೆ ಹೊಸ ಉತ್ಸಾಹ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Advertisement
ಪರಿವರ್ತನಾ ಸಮಾವೇಶದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ಭಾಗವಹಿಸೋ ಸಾಧ್ಯತೆ ಇದೆ. ಇದಕ್ಕಾಗಿ ಮೂವತ್ತೈದು ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ, ಗುಂಡೂರಾವ್ ಸೇರಿದಂತೆ ಆಯ್ದಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
Advertisement
ರಾಹುಲ್ ಆಗಮನದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ. ದಾವಣಗೆರೆ ಪೂರ್ವ ವಲಯದ ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ ನಾಲ್ಕು ಕೆಎಸ್‍ಆರ್‍ಪಿ ಹಾಗೂ ಎಂಟು ಡಿಎಆರ್ ತುಕಡಿಗಳನ್ನ ಸಮಾವೇಶದ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಹಾವೇರಿ ಎಸ್ಪಿ ಕೆ.ಪರಶುರಾಮ ತಿಳಿಸಿದ್ದಾರೆ.
ಒಟ್ಟಾರೆ ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಹಾವೇರಿಯಲ್ಲಿ ಎಲೆಕ್ಷನ್ ರಂಗೇರಿದ್ದು ರಾಹುಲ್ ಆಗಮನ ಕೈ ಪಾಳಯದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv