ಬೆಳಗ್ಗೆ ಅಥವಾ ಸಂಜೆ ಒಂದು ಕಪ್ ಚಹಾ ಇಲ್ಲದೇ ಹೋದರೆ ಹೆಚ್ಚಿನವರಿಗೆ ಆ ದಿನ ಕಳೆಯೋದೇ ಕಷ್ಟವೆನಿಸಿಬಿಡುತ್ತದೆ. ನಮ್ಮಲ್ಲಿ ಚಹಾ ಪ್ರಿಯರು ಹೆಚ್ಚಿನವರಿದ್ದಾರೆ. ಅವರಿಗಾಗಿ ನಾವಿಂದು ಡಿಫರೆಂಟ್ ಚಹಾ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ಅದುವೇ ಕಾಶ್ಮೀರಿ ಚಹಾ. ಪಿಂಕ್ ಬಣ್ಣದ ಈ ಚಹಾವನ್ನು ಕಾಶ್ಮೀರಿ ನೂನ್ ಚಹಾ ಎಂದು ಕರೆಯಲಾಗುತ್ತದೆ. ಈ ಚಹಾದಲ್ಲಿ ವಿಶೇಷತೆ ಏನೆಂದರೆ ಇದರ ಬಣ್ಣ ಹಾಗೂ ಉಪ್ಪಾದ ರುಚಿ. ಕಾಶ್ಮೀರಿ ಚಹಾ ಪುಡಿ ಎಲ್ಲೆಡೆ ಸಿಗೋದು ಸ್ವಲ್ಪ ಕಷ್ಟವಾಗಿರುವುದರಿಂದ ನಾವು ಸಾಮಾನ್ಯವಾಗಿ ಬಳಸುವ ಯಾವುದೇ ಹಸಿರು ಚಹಾದ ಪುಡಿಯನ್ನು ಬಳಸಿ ಇದನ್ನು ಮಾಡಬಹುದು. ಹಾಗಿದ್ರೆ ಕಾಶ್ಮೀರಿ ಚಹಾ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಐಸ್ ಕ್ಯೂಬ್ – 2-3
ನೀರು – 2 ಕಪ್
ಚಹಾ ಪುಡಿ – 2 ಟೀಸ್ಪೂನ್
ಸ್ಟಾರ್ ಅನೀಸ್ – 2
ಹಸಿರು ಏಲಕ್ಕಿ – 6-8
ಲವಂಗ – 2
ದಾಲ್ಚಿನ್ನಿ ಚಕ್ಕೆ – 1 ಇಂಚು
ಅಡುಗೆ ಸೋಡಾ – ಚಿಟಿಕೆ
ಹಾಲು – 1 ಕಪ್
ಉಪ್ಪು – ಕಾಲು ಟೀಸ್ಪೂನ್
ಸಕ್ಕರೆ – 2 ಟೀಸ್ಪೂನ್
ಒರಟಾಗಿ ಪುಡಿ ಮಾಡಿದ ಬಾದಾಮಿ, ಪಿಸ್ತಾ – 1 ಟೀಸ್ಪೂನ್ ಇದನ್ನೂ ಓದಿ: ಸಿಂಪಲ್ ಸ್ಟ್ರಾಬೆರಿ ಕಪ್‌ಕೇಕ್ ಹೀಗೆ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಕಪ್ ನೀರನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಐಸ್ ಕ್ಯೂಬ್ ಸೇರಿಸಿ ಪಕ್ಕಕ್ಕೆ ಇಡಿ.
* ಒಂದು ಲೋಹದ ಪಾತ್ರೆಯಲ್ಲಿ ಉಳಿದ ಒಂದು ಕಪ್ ನೀರು ಹಾಕಿ, ಹೆಚ್ಚಿನ ಉರಿಯಲ್ಲಿ ಬಿಸಿ ಮಾಡಿ.
* ಅದಕ್ಕೆ ಕಾಶ್ಮೀರಿ ಚಾಹಾ ಪುಡಿ, ಸ್ಟಾರ್ ಅನೀಸ್, ಹಸಿರು ಏಲಕ್ಕಿ ಬೀಜಗಳು, ಲವಂಗ ಮತ್ತು ದಾಲ್ಚಿನ್ನಿ ಸೇರಿಸಿ ಮತ್ತು ಕುದಿಸಿ.
* ಅದು ಕುದಿ ಬಂದ ನಂತರ ಅಡುಗೆ ಸೋಡಾ ಸೇರಿಸಿ. ಈ ಮಿಶ್ರಣವನ್ನು 5-6 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಕುದಿಸಿಕೊಳ್ಳಿ.
* ಒಂದು ಗ್ಲಾಸ್ ಬಳಸಿ ಸಾಂದರ್ಭಿಕವಾಗಿ ಸ್ವಲ್ಪ ಸ್ವಲ್ಪವೇ ಚಹಾವನ್ನು ಎತ್ತಿ ಮತ್ತೆ ಅದೇ ಪಾತ್ರೆಗೆ ಮೇಲಿನಿಂದ ಸುರಿಯಿರಿ. ಇದರಿಂದ ಚಹಾದಲ್ಲಿ ನೊರೆ ಮೂಡಿ, ಅದರ ಬಣ್ಣ ನಿಧಾನವಾಗಿ ಹಸಿರಿನಿಂದ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಹೀಗಾಗದಿದ್ದರೆ ನೀವು ಇನ್ನೊಂದು ಚಿಟಿಕೆ ಅಡುಗೆ ಸೋಡಾ ಬೆರೆಸಿ. ನೀರು ಬಹುತೇಕ ಆವಿಯಾಗಲು ಬಿಡಿ.
* ಈಗ ಬದಿಗಿಟ್ಟಿದ್ದ ಐಸ್ ನೀರನ್ನು ಸೇರಿಸಿ. ಹಾಲು, ಉಪ್ಪು ಮತ್ತು ಸಕ್ಕರೆ ಸೇರಿಸಿ ಸ್ವಲ್ಪ ಕುದಿಯಲು ಬಿಡಿ.
* ಬಳಿಕ ಉರಿಯನ್ನು ಆಫ್ ಮಾಡಿ ಚಹಾದ ಗ್ಲಾಸ್‌ಗಳಲ್ಲಿ ಸೋಸಿಕೊಳ್ಳಿ.
* ಅದಕ್ಕೆ ಒಣ ಬಾದಾಮಿ ಹಾಗೂ ಪಿಸ್ತಾ ಚೂರುಗಳಿಂದ ಅಲಂಕರಿಸಿದರೆ ಕಾಶ್ಮೀರಿ ಪಿಂಕ್ ಚಹಾ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಬೇಕರಿ ಮಾದರಿಯ ಪಂಪ್ಕಿನ್ ರೋಲ್ ಮಾಡಿ…!
Advertisement
Web Stories