ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಮಾತಿನ ಸಮರ ನಡೆಯುತ್ತಲೇ ಇದೆ. ಇಬ್ಬರು ನಾಯಕರು ತಮ್ಮ ಪ್ರಚಾರದ ಸಮಾವೇಶದಲ್ಲಿ ಒಬ್ಬರ ಮೇಲೋಬ್ಬರು ಹರಿಹಾಯುತ್ತಿದ್ದಾರೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಬಿಜೆಪಿ ನಾಯಕರೇ ಇದುವರೆಗೆ ಒಂದಾದರೂ ರಾಮಮಂದಿರವನ್ನು ಕಟ್ಟಿದ್ದೀರಾ ಎಂದು ಮಮತಾ ಪ್ರಶ್ನೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ವಿಷ್ಣುಪುರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಬಾಬುಗಳು ಜೈ ಶ್ರೀರಾಮ್ ಎಂದು ಹೇಳುತ್ತಾರೆ. ಚುನಾವಣೆ ಸಮಯದಲ್ಲಿ ಶ್ರೀ ರಾಮಚಂದ್ರ ತಮ್ಮ ಪಕ್ಷದ ಏಜೆಂಟ್ ನನ್ನಾಗಿ ಮಾಡಿಕೊಳ್ಳುತ್ತೀರಿ. ನೀವು ಘೋಷಣೆ ಕೂಗುವುದರ ಜೊತೆಗೆ ಬೇರೆಯವರ ಮೇಲೆಯೂ ಒತ್ತಡ ಹಾಕುತ್ತೀರಿ. ಆದರೆ ಇದುವರೆಗೆ ಒಂದಾದರೂ ರಾಮಮಂದಿರವನ್ನ ಕಟ್ಟಿದ್ದೀರಾ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಿದಾನಪುರ ಜಿಲ್ಲೆಯಲ್ಲಿ ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಮಾರ್ಗ ಮಧ್ಯೆ ಕೆಲ ಯುವಕರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಘೋಷಣೆ ಕೇಳುತ್ತಿದ್ದಂತೆಯೇ ಕಾರು ನಿಲ್ಲಿಸಿದ ಮಮತಾ ಬ್ಯಾನರ್ಜಿ, ಯುವಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸೋಮವಾರ ಪಶ್ಚಿಮ ಬಂಗಾಳದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಮೋದಿ, ಪಶ್ಚಿಮ ಬಂಗಾಳದಲ್ಲಿ ಜೈ ಶ್ರೀರಾಮ್ ಅನ್ನೋದು ದೊಡ್ಡ ಅಪರಾಧವಾಗಿದೆ. ಜೈ ಶ್ರೀರಾಮ್ ಘೋಷಣೆ ಕೂಗುವವರನ್ನು ಇಲ್ಲಿ ಜೈಲಿಗೆ ಹಾಕಲಾಗುತ್ತದೆ ಎಂದು ಆರೋಪಿಸಿದ್ದರು.