ಡೆಹ್ರಾಡೂನ್: 17 ದಿನಗಳ ಕಾರ್ಯಾಚರಣೆಯ ನಂತರ ಉತ್ತರಾಖಂಡದ ಸಿಲ್ಕ್ಯಾರ್ ಸುರಂಗದೊಳಗೆ (Tunnel Rescue) ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಿದ ಬೆನ್ನಲ್ಲೇ ಸುರಂಗ ತಜ್ಞ ಆರ್ನಾಲ್ಡ್ ಡಿಕ್ಸ್ (Arnold Dix), ದೇಗುಲಕ್ಕೆ ತೆರಳಿ ದೇವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
41 ಕಾರ್ಮಿಕರನ್ನು ಮಂಗಳವಾರ ಸಂಜೆ ರಕ್ಷಿಸಲಾಯಿತು. ಈ ಯಶಸ್ಸಿನ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕಾರ್ಯಾಚರಣೆ ಯಶಸ್ವಿಯಾದ ಮಾರನೇ ದಿನ (ಬುಧವಾರ) ಸುರಂಗದ ಪಕ್ಕದಲ್ಲೇ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ದೇಗುಲಕ್ಕೆ ತೆರಳಿ ಅರ್ನಾಲ್ಡ್ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಾವು ಆರಾಮಾಗಿದ್ದು, ಈಗ ದೀಪಾವಳಿ ಆಚರಿಸುತ್ತೇವೆ: ಸಂತಸ ಹಂಚಿಕೊಂಡ ಕಾರ್ಮಿಕರು
ದೀರ್ಘಾವಧಿಯ ಕಾರ್ಯಾಚರಣೆಯ ಸಂದರ್ಭದಲ್ಲಿ ರಕ್ಷಣಾ ಸ್ಥಳದಲ್ಲಿ ಪಾತ್ರ ವಹಿಸಿದ್ದ ಡಿಕ್ಸ್, ಸಿಕ್ಕಿಬಿದ್ದ ಕಾರ್ಮಿಕರ ಯಶಸ್ವಿ ರಕ್ಷಣೆ ನಿಜಕ್ಕೂ ಪವಾಡ ಎಂದು ಹೇಳಿದ್ದಾರೆ.
ರಕ್ಷಣೆ ಕುರಿತು ಮಾತನಾಡಿ, ನಾನು ಕ್ರಿಸ್‌ಮಸ್ ವೇಳೆಗೆ 41 ಜನರು ಮನೆಯಲ್ಲಿ ಇರುತ್ತಾರೆ. ಯಾರಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದೆ. ಕ್ರಿಸ್‌ಮಸ್ ಬೇಗನೆ ಬರುತ್ತಿದೆ. ನಾವು ಶಾಂತವಾಗಿದ್ದೇವೆ. ನಾವು ಅದ್ಭುತ ತಂಡವಾಗಿ ಕೆಲಸ ಮಾಡಿದ್ದೇವೆ. ಭಾರತವು ಅತ್ಯುತ್ತಮ ಇಂಜಿನಿಯರ್‌ಗಳನ್ನು ಹೊಂದಿದೆ. ಈ ಯಶಸ್ವಿ ಮಿಷನ್‌ನ ಭಾಗವಾಗಲು ನನಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧೈರ್ಯ ಮೆಚ್ಚುವಂತದ್ದು: ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ
ಜಿನೀವಾದಲ್ಲಿ ಇಂಟರ್ನ್ಯಾಷನಲ್ ಟನೆಲಿಂಗ್ ಮತ್ತು ಅಂಡರ್‌ಗ್ರೌಂಡ್ ಸ್ಪೇಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಡಿಕ್ಸ್, ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಉತ್ತರಕಾಶಿಯಲ್ಲಿ ನೆಲೆಸಿದ್ದಾರೆ. ರಕ್ಷಣಾ ತಂಡಗಳಿಗೆ ಸಹಾಯ ಮಾಡಿದರು. ಈ ಬಿಕ್ಕಟ್ಟಿನ ಮಧ್ಯೆ ಸಹಾಯ ಮಾಡಲು ಧಾವಿಸಿ ಪ್ರಶಂಸೆ ಪಡೆದಿದ್ದಾರೆ.
ಮಂಗಳವಾರ ಕಾರ್ಮಿಕರ ಸುರಕ್ಷತೆಗಾಗಿ ಡಿಕ್ಸ್, ತಾತ್ಕಾಲಿಕ ದೇವಾಲಯದ ಮುಂದೆ ಪ್ರಾರ್ಥಿಸುತ್ತಿರುವ ವಿಡಿಯೋ ಅನೇಕರ ಹೃದಯಗಳನ್ನು ಗೆದ್ದಿದೆ. ನಾನು ದೇವಸ್ಥಾನಕ್ಕೆ ಹೋಗಬೇಕು. ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದಾರೆ.