– ಶಿವಸೈನ್ಯ ಬಳಗದಿಂದ ಶಿವಣ್ಣನ ಹುಟ್ಟುಹಬ್ಬ ಆಚರಣೆ
ಬೆಂಗಳೂರು: ಲಂಡನ್‍ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭುಜದ ನೋವಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
ಶಿವಣ್ಣ ಅವರು ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆಯಷ್ಟೇ ಶಸ್ತ್ರ ಚಿಕಿತ್ಸೆಗಾಗಿ ಲಂಡನ್‍ಗೆ ತೆರಳಿದ್ದರು. ಹುಟ್ಟುಹಬ್ಬದ ಮುನ್ನಾದಿನವೇ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಕೂಡ ಲಂಡನ್‍ಗೆ ತೆರಳಿದ್ದಾರೆ. ಪುನೀತ್ ರಾಜಕುಮಾರ್ ಅವರು ಅಣ್ಣನ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಡಾ.ಶಿವರಾಜ್ ಕುಮಾರ್ ಆರೋಗ್ಯವಾಗಿದ್ದಾರೆ. ವೈದ್ಯರು ಒಂದು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ಆಪ್ತ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಟ್ವೀಟ್ ಮಾಡಿದ್ದಾರೆ.
Advertisement
ಜುಲೈ 12 ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಜನ್ಮದಿನ. ಶಿವಣ್ಣನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಕುಟುಂಬದವರು ಮತ್ತು ಹೆಸರಾಂತ ನಿರ್ದೇಶಕರು ನಿರ್ಮಾಪಕರು ಆಪ್ತರೆಲ್ಲರೂ ಸಜ್ಜಾಗಿದ್ದು, ವಿಶೇಷವಾಗಿ ಶಿವರಾಜ್ ಕುಮಾರ್ ಅವರ ಅಭಿಮಾನದ ಹೆಮ್ಮೆಯ ತಂಡ ಶಿವಸೈನ್ಯದ ಬಳಗ ಹಲವಾರು ಮಹೋನ್ನತ ಕಾರ್ಯಗಳ ಮೂಲಕ ಜನ್ಮದಿನ ಆಚರಿಸಲು ಮುಂದಾಗುತ್ತಿದೆ.
Advertisement
ಹುಟ್ಟುಹಬ್ಬದಂದು 11 ಗಂಟೆಗೆ ಅಣ್ಣಾವ್ರ ಪುಣ್ಯ ಭೂಮಿಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ಕೇಕ್ ಕತ್ತರಿಸಿ, ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಆಚರಣೆಗೆ ಮೆರಗು ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶಿವಣ್ಣ ಅವರಿಗೋಸ್ಕರ ಡೆಡಿಕೇಟ್ ಮಾಡಲು ಶಿವಸೈನ್ಯದವರು ಸಿದ್ಧ ಮಾಡಿರುವ ಮಹಾನ್ ಕಲಾವಿದ ಹಾಡನ್ನು, ನಿರ್ಮಾಪಕರು ಮತ್ತು ಅಣ್ಣಾವ್ರ ಕುಟುಂಬದ ಆಪ್ತರಾದ ಕೆ.ಪಿ.ಶ್ರೀಕಾಂತ್ ಅವರು ಬಿಡುಗಡೆಗೊಳಿಸಲಿದ್ದಾರೆ.
ಶಿವಣ್ಣ ಮತ್ತು ಪುನೀತ್ ರಾಜ್ ಕುಮಾರ್ ಅವರು ಇಬ್ಬರೂ ಸಹ ಲಂಡನ್‍ನಲ್ಲಿ ಇದ್ದಾರೆ. ಹೀಗಾಗಿ ಶುಕ್ರವಾರ ಮಧ್ಯಾಹ್ನ 1:00 ಕ್ಕೆ ಅಭಿಮಾನಿಗಳೊಂದಿಗೆ ಮಾತನಾಡಲು ಅಣ್ಣಾವ್ರ ಪುಣ್ಯಭೂಮಿಯಲ್ಲಿ ಎಲ್‍ಇಡಿ ಸ್ಕ್ರೀನ್ ಮುಖಾಂತರ ವಿಡಿಯೋ ಮೂಲಕ ಬರಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಅನ್ನದಾನ ಸಹ ಏರ್ಪಡಿಸಲಾಗಿದ್ದು, ಸಂತೃಪ್ತಿಯ ಹುಟ್ಟಹಬ್ಬಕ್ಕೆ ಸಾಕ್ಷಿಯಾಗಲಿದೆ.
ಪಬ್ಲಿಕ್ ಟಿವಿ ಜೊತೆ ಜೂನ್ 24ರಂದು ಮಾತನಾಡಿದ್ದ ಶಿವರಾಜ್‍ಕುಮಾರ್ ಅವರು, ಹುಟ್ಟುಹಬ್ಬ ದಿನ ನನ್ನ ಶಸ್ತ್ರಚಿಕಿತ್ಸೆ ಇದೆ. ನನಗೆ ಭುಜದ ನೋವು ಆಗಾಗ ಕಾಣಿಸುತ್ತಿದೆ. ಹಾಗಾಗಿ ನಾನು ಶಸ್ತ್ರಚಿಕಿತ್ಸೆಗೆ ಹೋಗಬೇಕಾಗುತ್ತೆ. ಹುಟ್ಟುಹಬ್ಬ ನಂತರ ಹೋಗೋಣ ಎಂದುಕೊಂಡೆ. ಆದರೆ ನನಗೆ ಬೇರೆ ದಿನ ಅಪಾಯಿಂಟ್‍ಮೆಂಟ್ ಸಿಗಲಿಲ್ಲ. ಇದನ್ನು ಮಿಸ್ ಮಾಡಿದ್ರೆ ಆಗಸ್ಟ್ ವರೆಗೂ ಕಾಯಬೇಕು. ಹೀಗಾಗಿ ನಾನು ಲಂಡನ್‍ಗೆ ಹೋಗಲೇಬೇಕು ಎಂದಿದ್ದರು.
ಆಗಸ್ಟ್ ವರೆಗೂ ಕಾಯಬೇಕೆಂದರೆ ನೋವು ಜಾಸ್ತಿ ಆಗುತ್ತೆ. ಆಗ ನನ್ನ ಸಮಸ್ಯೆ ಜಾಸ್ತಿ ಆಗುತ್ತದೆ. ಅಭಿಮಾನಿಗಳಿಗೆ ಈ ಬಗ್ಗೆ ಗೊತ್ತು. ಅವರು ಕೂಡ ಆರೋಗ್ಯ ಮುಖ್ಯ ಹೋಗಿ ಬನ್ನಿ ಎಂದು ಹೇಳಿದ್ದಾರೆ. ನಾನು ಕೂಡ ನನ್ನ ಹುಟ್ಟುಹಬ್ಬವನ್ನು ಮಿಸ್ ಮಾಡಿಕೊಳ್ಳುತ್ತೇನೆ. ಏಕೆಂದರೆ ಅವರು ನನ್ನ ಹುಟ್ಟುಹಬ್ಬವನ್ನು ಹೇಗೆ ಸಂಭ್ರಮದಿಂದ ಆಚರಿಸುತ್ತಾರೋ, ನನಗೂ ಹಾಗೇ ಅವರ ಹುಟ್ಟುಹಬ್ಬ ಆಚರಿಸುವುದು ಸಂಭ್ರಮನೇ. ಅವರು ಮಿಸ್ ಮಾಡಿಕೊಂಡರೆ ನಾನು ಡಬಲ್ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು.
ನನ್ನ ಹುಟ್ಟುಹಬ್ಬಕ್ಕೆ ಸ್ವಲ್ಪ ರೇಗಾಟ, ಪ್ರೀತಿ, ಊಟ ಇರುತ್ತೆ. ಎಲ್ಲರೂ ಹಾಗೂ ಚಿತ್ರರಂಗದ ಸದಸ್ಯರು ಬಂದು ಶುಭಾಶಯ ತಿಳಿಸುತ್ತಾರೆ. ನಾನು ಇಲ್ಲಿ ಇಲ್ಲ ಎಂದರು ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಹಾಗಾಗಿ ನಾನು ಲಂಡನ್‍ನಿಂದ ಹಿಂತಿರುಗಿ ಬಂದ ನಂತರ ಒಂದು ಗೆಟ್- ಟು-ಗೆದರ್ ಮಾಡುತ್ತೇನೆ ಎಂದು ನಟ ಶಿವರಾಜ್‍ಕುಮಾರ್ ತಿಳಿಸಿದ್ದರು.
ನನಗೆ ಭುಜದ ನೋವಿದೆ. ನನಗೆ ಚಿಕಿತ್ಸೆ ನೀಡಿದ್ದ ವೈದ್ಯರೇ ಶಾರೂಕ್ ಖಾನ್ ಹಾಗೂ ಎಸ್. ಎಂ ಕೃಷ್ಣ ಅವರಿಗೂ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಜರಿ ಮಾಡಿದ ಬಳಿಕ ನಾಲ್ಕು ತಿಂಗಳು ಆಯಕ್ಷನ್ ಸೀನ್ ಮಾಡಬಾರದು. ನಾಲ್ಕು ತಿಂಗಳ ಮೇಲೆಯೇ ಆ್ಯಕ್ಷನ್ ಸೀನ್ ಮಾಡಲಿದ್ದೇನೆ. ಚಿಕ್ಕ ಪುಟ್ಟ ಆ್ಯಕ್ಷನ್ ಸೀನ್ ಮಾಡಬಹುದು. ಬಳಿಕ `ಭಜರಂಗಿ- 2′ ಚಿತ್ರದಲ್ಲಿ ಸಾಕಷ್ಟು ಆಯಕ್ಷನ್ ಸೀನ್ ಇದೆ. ಆ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಶಿವರಾಜ್‍ಕುಮಾರ್ ಹೇಳಿದ್ದರು.