ಲಕ್ನೋ: ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತದಿಂದಾಗಿ ನೂರಾರು ಮಂದಿ ದುರಂತ ಸಾವಿಗೀಡಾಗಿರುವ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಹೆಣಗಳ ರಾಶಿ ಕಂಡು ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇಟಾಹ್ ಜಿಲ್ಲೆಯ ಅವಘರ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಕಾನ್‌ಸ್ಟೆಬಲ್ ರವಿ, ಹತ್ರಾಸ್ (Hathras) ಸತ್ಸಂಗದಲ್ಲಿ ಮೃತಪಟ್ಟವರ ಮೃತದೇಹಗಳನ್ನು ನೋಡಿದ ನಂತರ ಹೃದಯಾಘಾತಕ್ಕೆ ಒಳಗಾಗಿದ್ದರು. ಇಟಾಹ್ ವೈದ್ಯಕೀಯ ಕಾಲೇಜಿನಲ್ಲಿ ನಿಧನರಾದರು. ಇದನ್ನೂ ಓದಿ: ಹತ್ರಾಸ್ ದುರಂತ- ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಾಳುಗಳಿಗೆ ತಲಾ 50 ಸಾವಿರ ನೆರವು
ರವಿ ಒಂದು ತಿಂಗಳಿನಿಂದ ತನ್ನ ಸಹೋದ್ಯೋಗಿ ಶೇಖರ್ ಪ್ರೇಮಿಯೊಂದಿಗೆ ಕ್ಯೂಆರ್‌ಟಿ ಕರ್ತವ್ಯದ ಮೇಲೆ ಇಟಾಹ್ ನಗರದಲ್ಲಿ ನೆಲೆಸಿದ್ದರು. ಹತ್ರಾಸ್ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಇಟಾಹ್ ವೈದ್ಯಕೀಯ ಕಾಲೇಜಿಗೆ ಹೋಗುವಂತೆ ಅವರಿಗೆ ಸೂಚಿಸಲಾಗಿತ್ತು.
ಅಲ್ಲಿಗೆ ಬಂದ ಕಾನ್‌ಸ್ಟೇಬಲ್ ರವಿಗೆ ಮೃತದೇಹಗಳನ್ನು ನೋಡಿ ತಲೆ ತಿರುಗತೊಡಗಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರೇಮ್ ರಂಜನ್ ಸಿಂಗ್, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಿಂಗ್ ಮತ್ತು ಇತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದರು. ಮೈಬಿಸಿ ಕಾರಣ ರವಿ ತನ್ನ ಶರ್ಟ್ ತೆಗೆದು ಹಾಕಿದರು. ತಕ್ಷಣ ಅಧಿಕಾರಿಗಳು ಹವಾನಿಯಂತ್ರಿತ ಕೋಣೆಗೆ ಅವರನ್ನು ಸ್ಥಳಾಂತರಿಸಿದರು. ಆದರೆ, ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಹತ್ರಾಸ್ ಕಾಲ್ತುಳಿತದಿಂದ ಇದುವರೆಗೆ 116 ಮಂದಿ ಬಲಿಯಾಗಿದ್ದಾರೆ. ಅವರ ಪೈಕಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನೂ ಓದಿ: ಹತ್ರಾಸ್‌ನಲ್ಲಿ ಕಾಲ್ತುಳಿತಕ್ಕೆ 27 ಮಂದಿ ಸಾವು, ಹಲವರಿಗೆ ಗಾಯ