– ಮೃತರ ಕುಟುಂಬಗಳಿಗೆ ತಲಾ 4 ಲಕ್ಷ, ಗಾಯಾಳುಗಳಿಗೆ ತಲಾ 1 ಲಕ್ಷ
– ಪ್ರಕರಣ ಎಸ್‌ಐಟಿ ತನಿಖೆಗೆ
ಲಕ್ನೋ: ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಪರಿಹಾರದ ಮೊತ್ತದಲ್ಲಿ ಹೆಚ್ಚಳ ಮಾಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ, ಗಾಯಾಳುಗಳಿಗೆ ತಲಾ 1 ಲಕ್ಷ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಘಟನೆಯ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಗೆ ನೀಡುವುದಾಗಿ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಮಟ್ಟಿಗೆ ಭಕ್ತರ ರಕ್ಷಣೆ ಮತ್ತು ಸುರಕ್ಷತೆಗೆ ಒತ್ತು ನೀಡುವುದು ನಮ್ಮ ಆದ್ಯತೆಯಾಗಿದೆ. ಸತ್ಸಂಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಪೈಕಿ 121 ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ಯುಪಿ, ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಭಕ್ತರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಸದ್ಯ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಹುತೇಕ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.
ನಾನು ಹಲವಾರು ಪ್ರತ್ಯಕ್ಷದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಕಾರ್ಯಕ್ರಮ ಮುಗಿದ ನಂತರ ಸತ್ಸಂಗದ ಪ್ರಚಾರಕರು ಬರುತ್ತಿದ್ದಾಗ ಘಟನೆ ನಡೆದಿದೆ ಎಂದು ತಿಳುದುಬಂದಿದೆ. ವೇದಿಕೆಯಿಂದ ಕೆಳಗೆ ಬಾಬಾ ಇಳಿಯುತ್ತಿದ್ದಂತೆ, ಹಲವಾರು ಮಹಿಳೆಯರು ಅವರ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ. ಅವರನ್ನು ತಡೆಯುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಸಿಎಂ ವಿವರಿಸಿದರು. ಇದನ್ನೂ ಓದಿ: 2.5 ಲಕ್ಷ ಮಂದಿ ಭಾಗಿ, ದೇವಮಾನವನ ಕಾರಿನ ಚಕ್ರದ ಧೂಳನ್ನು ಸಂಗ್ರಹಿಸಲು ಮುಗಿಬಿದ್ದ ಅನುಯಾಯಿಗಳು!
ಸದ್ಯ ಆಗ್ರಾ ಎಡಿಜಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ್ದೇವೆ. ಈ ತಂಡ ಪ್ರಾಥಮಿಕ ವರದಿ ಸಲ್ಲಿಸಿದೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದೇನೆ. ಅಲ್ಲದೆ ರಾಜ್ಯ ಸರ್ಕಾರವು ನ್ಯಾಯಾಂಗ ತನಿಖೆ ನಡೆಸಲು ನಿರ್ಧರಿಸಿದೆ. ಇದರ ನೇತೃತ್ವವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ವಹಿಸಲಿದ್ದಾರೆ. ಆಡಳಿತ ಮತ್ತು ಪೊಲೀಸ್‌ನ ನಿವೃತ್ತ ಹಿರಿಯ ಅಧಿಕಾರಿಗಳು ಸಹ ಭಾಗವಾಗಲಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಈ ಘಟನೆಯಲ್ಲಿ ಸಂತ್ರಸ್ತರಾದ ಶಾಲಾ ವಿದ್ಯಾರ್ಥಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲಾಗುವುದು. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 1 ಲಕ್ಷ ರೂಪಾಯಿ ನೀಡಲಾಗುವುದು ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.