ಹಾಸನ: ವರ್ಷಕ್ಕೊಮ್ಮೆಯಷ್ಟೇ ಬಾಗಿಲು ತೆಗೆಯುವ ಹಾಸನಾಂಬೆಯ ದರ್ಶನಕ್ಕೆ ದಿನಗಣನೆ ಶುರುವಾಗಿದ್ದು, ಅಕ್ಟೋಬರ್ 17 ರಿಂದ 29 ರವರಗೆ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ. ಒಟ್ಟು 13 ದಿನಗಳಲ್ಲಿ ಮೊದಲ ಮತ್ತು ಕೊನೆಯ ದಿನ ಹೊರತುಪಡಿಸಿ ಉಳಿದೆಲ್ಲ ದಿನಗಳು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಸಿಗಲಿದೆ.
ಒಂದು ವರ್ಷಗಳ ಕಾಲ ದೀಪ ಉರಿಯುತ್ತಿರುತ್ತದೆ ಎನ್ನುವ ಪವಾಡ ಹಾಸನಾಂಬೆಯದ್ದಾಗಿದೆ. ದೇವಿಯ ಸನ್ನಿಧಿಗೆ ಆಗಮಿಸಿ ಪ್ರತಿವರ್ಷ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಾರೆ. ಹಾಸನದ ಅಧಿದೇವತೆಯ ದೇವಸ್ಥಾನದ ಬಾಗಿಲು ಪ್ರತಿ ವರ್ಷ ಆಶ್ವಿಜ ಮಾಸದ ಮೊದಲ ಗುರುವಾರ ತೆರೆಯಲಿದೆ. ಬಲಿಪಾಡ್ಯಮಿ ಮಾರನೇ ದಿನ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಈ ಸಂಪ್ರದಾಯ ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.
Advertisement
Advertisement
ಈ ಸಂಪ್ರದಾಯದಂತೆ ಅಕ್ಟೋಬರ್ 17 ರಿಂದ 29 ರ ವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಬಾರಿ ಅಮ್ಮನವರನ್ನು ಎದುರುಗೊಳ್ಳುವ ಅಪೂರ್ವ ಅವಕಾಶ ಸಿಗುವುದು 11 ದಿನಗಳು ಮಾತ್ರ. ಈ ವರ್ಷದ ಉತ್ಸವ ಆರಂಭವಾಗಲು ಕೇವಲ 30 ದಿನಗಳು ಮಾತ್ರ ಬಾಕಿ ಇವೆ. ಬಾಗಿಲು ಮುಚ್ಚುವ ವೇಳೆ ಹಚ್ಚಿದ ಹಣತೆ ಹಾಗೇ ಬೆಳಗುತ್ತಿರುತ್ತದೆ ಎಂಬ ಪವಾಡ ನಂಬಿಕೆಗಳಿರುವುದರಿಂದ ಪ್ರತಿವರ್ಷ ಜಿಲ್ಲೆ, ರಾಜ್ಯ ಮಾತ್ರವಲ್ಲದೇ ದೂರದೂರುಗಳಿಂದಲೂ ಅಪಾರ ಭಕ್ತರು ಆಗಮಿಸುತ್ತಾರೆ.
Advertisement
Advertisement
ಸಾಮಾನ್ಯ ದರ್ಶನವನ್ನು ಪಡೆಯುವ ಭಕ್ತಾದಿಗಳಿಗೆ ಧರ್ಮದರ್ಶನದ ವ್ಯವಸ್ಥೆ ಪ್ರತಿವರ್ಷದಂತೆ ಈ ಬಾರಿಯೂ ಇರಲಿದೆ. ಅಲ್ಲದೆ, ವಿಶೇಷ ದರ್ಶನಕ್ಕೆ ವ್ಯವಸ್ಥೆ ಸಹ ಮಾಡಲಾಗಿದೆ. ಒಂದು ಸಾವಿರ ರೂ. ಮತ್ತು 300 ರೂ. ಪಾಸ್ ಪಡೆದು ದೇವಿಯ ದರ್ಶನ ಪಡೆಯಬಹುದಾಗಿದೆ. ಒಂದು ಸಾವಿರ ರೂ.ನ ವಿಶೇಷ ದರ್ಶನಕ್ಕೆ 4 ಲಾಡುಗಳು ಮತ್ತು 300 ರೂಪಾಯಿ ದರ್ಶನಕ್ಕೆ 2 ಲಾಡುಗಳು ಪ್ರಸಾದವಾಗಿ ಸಿಗಲಿದೆ.