ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ – ನಂಗೆ ಮದ್ವೆ ಬೇಡ ಎಂದ ವಧು, ವರ ಶಾಕ್‌

Public TV
1 Min Read
Bride Opposes Marriage In The Last Moment Wedding Cancelled in Hassana

– ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಘಟನೆ

ಹಾಸನ : ಸಿನಿಮಾ ದೃಶ್ಯದಂತೆ ತಾಳಿ ಕಟ್ಟುವ ವೇಳೆ ವಧು (Bride) ಮದುವೆಯನ್ನೇ ನಿಲ್ಲಿಸಿದ ಘಟನೆ ಹಾಸನ ನಗರದಲ್ಲಿ ನಡೆದಿದೆ.

ಹಾಸನ (Hassana) ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲ್ಲೂಕಿನ ವೇಣುಗೋಪಾಲ.ಜಿ ಜೊತೆ ಮದುವೆ (Marriage) ನಿಶ್ಚಯವಾಗಿತ್ತು.

ಮುಹೂರ್ತದ ವೇಳೆ ವಧುವಿಗೆ ಕರೆ ಬಂದಿದೆ. ಕರೆ ಬಂದ ಬೆನ್ನಲ್ಲೇ ವಧು ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡ ಎಂದು ಹಠ ಹಿಡಿದಿದ್ದಾಳೆ.

ತಕ್ಷಣವೇ ಮದುವೆ ಬೇಡ ಎಂದು ಪಲ್ಲವಿ ಕೊಠಡಿಗೆ ಹೋಗ ಬಾಗಿಲು ಹಾಕಿಕೊಂಡಿದ್ದಾಳೆ. ಪಲ್ಲವಿಯ ಮನವೊಲಿಸಲು ಪೋಷಕರು ಶತಾಯಗತಾಯ ಪ್ರಯತ್ನಪಟ್ಟಿದ್ದಾರೆ. ವಿಚಾರ ತಿಳಿದು ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸಿದ್ದಾರೆ.

 

ಪೋಷಕರ ಮನವೊಲಿಕೆಗೂ ಕ್ಯಾರೇ ಎನ್ನದ ಯುವತಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾಳೆ. ಯುವತಿ ಹಠವನ್ನು ನೋಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿರುವ ವೇಣುಗೋಪಾಲ ನನಗೂ ಈ ಮದುವೆ ಬೇಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್‌ ಸಂದರ್ಶನ ನೀಡಿ ತಗಲಾಕಿಕೊಂಡ ದಾಸ – ಖುದ್ದು ಹಾಜರಿಗೆ ಕೋರ್ಟ್‌ನಿಂದ ದರ್ಶನ್‌, ವಿಜಯಲಕ್ಷ್ಮಿಗೆ ಸಮನ್ಸ್‌ 

ಕಲ್ಯಾಣಮಂಟಪಕ್ಕೆ ವಧು-ವರನ ಕಡೆಯ ನೂರಾರು ಮಂದಿ ಆಗಮಿಸಿದ್ದರು. ಕಡೆ ಗಳಿಗೆಯಲ್ಲಿ ಮದುವೆ ನಿಂತು ಹೋಗಿದ್ದಕ್ಕೆ ವಧುವಿನ ಪೋಷಕರು ಕಣ್ಣೀರಿಟ್ಟಿದ್ದಾರೆ.

ಪಲ್ಲವಿ ಸ್ನಾತಕೋತ್ತರ ಪದವಿ ಓದಿದ್ದು ಸದ್ಯ ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ. ಪ್ರೀತಿಸುವ ಹುಡುಗನ ಬಗ್ಗೆ ಸದ್ಯ ಯಾವುದೇ ವಿವರ ಲಭ್ಯವಾಗಿಲ್ಲ.

ಪಬ್ಲಿಕ್‌ ಟಿವಿ ಜೊತೆ ವಧುವಿನ ಸಂಬಂಧಿ ಮಂಜುನಾಥ್‌ ಮಾತನಾಡಿ, ಯುವತಿ ಪೋಷಕರ ಜೊತೆ ಪ್ರೀತಿಸುವ ವಿಚಾರವನ್ನು ತಿಳಿಸಿರಲಿಲ್ಲ. ಮೊದಲೇ ತಿಳಿಸಿದ್ದರೆ ಮದುವೆ ಮಾಡುತ್ತಿರಲಿಲ್ಲ. ಆಕೆಯ ಪೋಷಕರು ಶಾಕ್‌ನಲ್ಲಿ ಇದ್ದು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಮದುವೆಗೆ ಬಹಳಷ್ಟು ಹಣ ಖರ್ಚು ಮಾಡಿದ್ದಾರೆ. ಈಗ ಪೊಲೀಸರ ಮೂಲಕ ಖರ್ಚು ವೆಚ್ಚಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

Share This Article