ಹಾಸನ: ಸೇತುವೆ ಮೇಲಿನಿಂದ ಜಂಪ್ ಮಾಡಿ ಹೇಮಾವತಿ ನದಿ ನೀರಿನಲ್ಲಿ ಮೂವರು ಯುವಕರು ಕೊಚ್ಚಿ ಹೋಗಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಹುಣಸವಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಚ್ಚಿ ಹೋದ ಯುವಕರನ್ನು ರತನ್ (22), ಭೀಮರಾಜ್ (27) ಮತ್ತು ಮನು (27) ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಹಬ್ಬದ ನಿಮಿತ್ತ ಸ್ನಾನಕ್ಕೆ ಎಂದು ನದಿಯ ಬಳಿ ಹೋಗಿದ್ದ ಮೂವರು ಗೆಳೆಯರು ನಂತರ ಮೋಜಿಗಾಗಿ ಸೇತುವೆ ಮೇಲಿನಿಂದ ಹಾರಿದ್ದಾರೆ.
ಮೊದಲು ರತನ್ ಜಂಪ್ ಮಾಡಿದ್ದು, ನಂತರ ಆತನನ್ನು ಹಿಂಬಾಲಿಸಿ ಭೀಮರಾಜ್ ಮತ್ತು ಮನು ಹೋಗಿದ್ದಾರೆ. ನದಿಯ ನೀರು ರಭಸದಿಂದ ಹರಿಯುತ್ತಿರುವ ಕಾರಣ, ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.