ಹಾಸನ: ಇಡೀ ಪ್ರಪಂಚವೇ ಕೊರೊನಾ ಮಹಾಮಾರಿಗೆ ತಲ್ಲಣಿಸಿದ್ರೆ ಹಾಸನದಲ್ಲಿ ಮಾತ್ರ ಶಾಸಕ ಪ್ರೀತಂಗೌಡ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಪರ, ವಿರೋಧವಾಗಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಪರಸ್ಪರ ವಾಗ್ದಾಳಿಯಲ್ಲಿ ತೊಡಗಿದ್ದಾರೆ.
ಮದ್ಯ ಮಾರುವ ವಿಷಯವಾಗಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಪ್ರೀತಂಗೌಡ ನಡುವೆ ಜಿಲ್ಲಾ ಉಸ್ತುವಾರಿ ಸಚಿವರ ಎದುರೇ ಮಾತಿನ ಚಕಮಕಿಯಾಗಿತ್ತು. ಇದಾದ ನಂತರ ಬಿಜೆಪಿಯವರು ಪ್ರೀತಂಗೌಡ ಪರ ಬ್ಯಾಟಿಂಗ್ ಮಾಡುತ್ತಾ ಪ್ರಜ್ವಲ್ ರೇವಣ್ಣ ವಿರುದ್ಧ ಹರಿಹಾಯುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ವಿನಾಕಾರಣ ಆರೋಪ ಮಾಡುತ್ತಾ ಶಾಸಕ ಪ್ರೀತಂಗೌಡ ವಿರುದ್ಧ ಏಕವಚನ ಪದ ಪ್ರಯೋಗ ಮಾಡಿದ್ದಾರೆ. ಜಿಲ್ಲೆಯಲ್ಲಿ ಒಬ್ಬರೇ ಒಬ್ಬ ಬಿಜೆಪಿ ಶಾಸಕ ಇರುವುದರಿಂದ ಜೆಡಿಎಸ್‍ನ ಎಲ್ಲ ಜನಪ್ರತಿನಿಧಿಗಳು ಸೇರಿಕೊಂಡು ಮದ್ಯಪಾನ ಮಾರಾಟದ ವಿಚಾರದಲ್ಲಿ ಪ್ರೀತಂಗೌಡ ಮೇಲೆ ತಪ್ಪು ಅಭಿಪ್ರಾಯ ಮೂಡಿಸುವ ಯತ್ನ ಮಾಡುತ್ತಿದ್ದಾರೆ. ಆದರೆ ಶಾಸಕರು ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಹೋರಾಡುವುದರ ಜೊತೆಗೆ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರಿಗಾಗಿ ದುಡಿಯುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಇತ್ತ ಜೆಡಿಎಸ್‍ನವರು ನಾವೇನು ಬಿಜೆಪಿಯವರಿಗೆ ಕಮ್ಮಿಯಿಲ್ಲ ಎಂಬಂತೆ ಶಾಸಕ ಪ್ರೀತಂಗೌಡ, ತಮ್ಮ ವಿರುದ್ಧ ನಿಂತವರನ್ನು ಹೆದರಿಸಲು ಪುನೀತ್ ಎಂಬ ಗೂಂಡಾನನ್ನು ಬಿಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಕೊರೊನಾ ಸಮಯದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಹೋರಾಟ ಮಾಡಿ, ಜನ ಸಾಮಾನ್ಯರಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ. ಆದರೆ ಪ್ರೀತಂಗೌಡ ರಾಜಕಾರಣ ಮಾಡುತ್ತಾ ಬೆಂಗಳೂರಲ್ಲಿ ನೆಲೆಸಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.