ಹಾಸನ: ಹಾಸನದ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳು ಸೇರಿ ಹೊಳೆನರಸೀಪುರದ ಸರ್ಕಾರಿ ಐಬಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದಾರೆ.
ಇತ್ತೀಚೆಗೆ ತಮಕೂರಿನ ಕುಣಿಗಲ್‍ನಲ್ಲಿ ಇದೇ ರೀತಿ ಪಿಡಬ್ಲ್ಯೂಡಿ ಅಧಿಕಾರಿಗಳು ಸರ್ಕಾರಿ ಐಬಿಯಲ್ಲಿ ಪಾರ್ಟಿ ಮಾಡಿದ್ದರು. ಈಗ ಇದೇ ರೀತಿಯ ಘಟನೆ ಹಾಸನದಲ್ಲಿ ನಡೆದಿದ್ದು, ಮಹಿಳಾ ತಹಶೀಲ್ದಾರ್ ಗಳು ಸೇರಿದಂತೆ ಹೊಳೆನರಸೀಪುರ, ಹಾಸನ, ಸಕಲೇಶಪುರ, ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಅರಕಲಗೂಡು ತಹಶೀಲ್ದಾರ್ ಸೇರಿ ಐಬಿಯಲ್ಲಿ ಪಾರ್ಟಿ ಮಾಡಿದ್ದಾರೆ.
ಶುಕ್ರವಾರ ತಡರಾತ್ರಿ ಈ ಪಾರ್ಟಿ ನಡೆದಿದ್ದು, ಜಿಲ್ಲೆಯ ಆರು ತಾಲೂಕಿನ ತಹಶೀಲ್ದಾರ್ ಗಳು ಇದರಲ್ಲಿ ಭಾಗಿಯಾಗಿದ್ದಾರೆ. ಹೊಳೆನರಸೀಪುರ ತಾಲೂಕಿನ ತಹಶೀಲ್ದಾರ್ ಶ್ರೀನಿವಾಸ್, ಸಕಲೇಶಪುರ ತಹಶೀಲ್ದಾರ್ ರಕ್ಷಿತ್, ಹಾಸನ ತಹಶೀಲ್ದಾರ್ ಮೇನಕಾಗಾಂಧಿ ಸೇರಿ ಒಟ್ಟು ಏಳು ಜನ ತಹಶೀಲ್ದಾರ್ ಗಳು ಸೇರಿಕೊಂಡು ಐಬಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದಾರೆ.
ಇದನ್ನು ಬಿಜೆಪಿ ಕಾರ್ಯಕರ್ತ ನಾಗೇಶ್ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುತ್ತಿರುವುದನ್ನು ಕಂಡ ತಹಶೀಲ್ದಾರ್ ಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಈ ವೇಳೆ ವಿಡಿಯೋ ಮಾಡಿದ ನಾಗೇಶ್ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ವಿಡಿಯೋ ಚಿತ್ರೀಕರಣ ಹಿನ್ನೆಲೆಯಲ್ಲಿ ನಾಗೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.