ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಲಿ ಎಂದು ನಾನೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ – ಭವಾನಿ ರೇವಣ್ಣ

Public TV
1 Min Read
bhavni revanna

ಹಾಸನ: ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಮಕ್ಕಳ ಫಲಿತಾಂಶ ಉತ್ತಮವಾಗಲಿ ಎಂದು ನಾನೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ. ಅದಕ್ಕೆ ತಕ್ಕ ಫಲಿತಾಂಶವನ್ನು ಭಗವಂತ ನೀಡಿದ್ದಾನೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಅವರ ಪತ್ನಿ ಮತ್ತು ಜಿಲ್ಲೆಯ ಜಿ.ಪಂ. ಶಿಕ್ಷಣ ಮತ್ತು ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರಲು ಯಾರು ಎಷ್ಟು ಸಭೆ ಮಾಡಿದ್ದಾರೆ ಎನ್ನುವುದು ನಮ್ಮ ಜಿಲ್ಲೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಗೊತ್ತು. ಎಸ್‍ಎಸ್‍ಎಲ್‍ಸಿ ಫಲಿತಾಂಶ ದಲ್ಲಿ ಹಾಸನ ನಂಬರ್ ಒನ್ ಬಂದಿರೋದು ನನಗೆ ಖುಷಿಯಾಗಿದೆ. ಕಳೆದ ವರ್ಷದ ಫಲಿತಾಂಶದಲ್ಲಿ 31ನೇ ಸ್ಥಾನದಲ್ಲಿದ್ದ ನಾವು 7 ಸ್ಥಾನಕ್ಕೆ ಬಂದಿದ್ದೇವು. ಈ ವರ್ಷ ಮೊದಲ ಸ್ಥಾನ ಬಂದಿದ್ದೇವೆ ಇದಕ್ಕೆ ಕೇವಲ ನಮ್ಮ ಕುಟುಂಬ ವರ್ಗ ಮಾತ್ರ ಕಾರಣವಲ್ಲ. ಈ ಫಲಿತಾಂಶ ಬರಲು ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಪ್ರಯತ್ನ ಬಹಳ ದೊಡ್ಡದು ಎಂದು ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಪ್ರಯತ್ನವನ್ನು ಪರೋಕ್ಷವಾಗಿ ಅಲ್ಲಗೆಳೆದರು.

jds

ಫಲಿತಾಂಶ ಏರಿಕೆಯಲ್ಲಿ ಪತ್ನಿ ಕೊಡುಗೆ ಕೊಂಡಾಡಿದ್ದ ಸಚಿವ ರೇವಣ್ಣ ಅವರನ್ನು ಸಮರ್ಥಿಸಿಕೊಂಡ ಭವಾನಿ ಅವರು, ಇಡೀ ರಾಜ್ಯದಲ್ಲಿ ಪೋಷಕರ ಸಭೆ ಮಾಡಿದ್ದು ನಮ್ಮ ಜಿಲ್ಲೆಯಲ್ಲೇ ಮೊದಲು. ಮಕ್ಕಳ ಫಲಿತಾಂಶ ಉತ್ತಮವಾಗಿ ಬರಲಿ ಎಂದು ನಾನು ಸ್ವತಃ ಹಲವು ಸ್ವಯಂಪ್ರೇರಿತ ಕ್ರಮಗಳನ್ನು ಕೈಗೊಂಡಿದ್ದರಿಂದ ರೇವಣ್ಣನವರು ಹಾಗೆ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.

ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರವಾಗಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ನಮ್ಮ ಪುತ್ರ ಪ್ರಜ್ವಲ್ ಕನಿಷ್ಟ ಮೂರು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾನೆ. ನಮಗೆ ಗೆಲುವಿನ ಬಗ್ಗೆ ಕುತೂಹಲ ಇಲ್ಲಾ ಲೀಡ್ ಬಗ್ಗೆ ಕುತೂಹಲ ಇದೆ. ಹಾಸನ, ಮಂಡ್ಯ, ತುಮಕೂರು ಮೂರು ಕಡೆ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *