ಹಾಸನ: ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ಹಾಸನ ಎಸ್‍ಪಿ ಜಿಲ್ಲೆಯಲ್ಲಿ ವಿನೂತನ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಪ್ರತಿ ಎರಡು ವಾರಗಳಿಗೊಮ್ಮೆ ಶುಕ್ರವಾರದಂದು ಹಾಸನ ಎಸ್‍ಪಿ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ. ಹಾಸನ ಜಿಲ್ಲೆಯ ಯಾರೇ ಆದರೂ ತಮಗಾಗುತ್ತಿರುವ ಅಥವಾ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯಗಳನ್ನು ಫೋನ್ ಮೂಲಕ ಎಸ್‍ಪಿಯವರಿಗೆ ತಿಳಿಸಬಹುದಾಗಿದೆ. ಸ್ವತಃ ಎಸ್‍ಪಿಯವರೇ ಖುದ್ದು ಫೋನ್ ರಿಸೀವ್ ಮಾಡಿ ಮಾತನಾಡುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಲಿದ್ದಾರೆ.
Advertisement
Advertisement
ಈ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ ನಿರಂತರವಾಗಿ ನಡೆಯಲಿದೆ. ಪ್ರತಿ ಎರಡು ವಾರಗಳಿಗೆ ಒಮ್ಮೆ ನಡೆಯುವ ಫೋನ್ ಇನ್ ಕಾರ್ಯಕ್ರಮದಲ್ಲಿ, ಒಮ್ಮೆ ತಾವು ಹೇಳಿಕೊಂಡ ಸಮಸ್ಯೆ ಬಗೆಹರಿಯದಿದ್ರೆ, ಮತ್ತೆ ಕರೆ ಮಾಡುವ ಮೂಲಕ ಎಸ್‍ಪಿಯವರ ಬಳಿ ತಮ್ಮ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂಬುದನ್ನು ಸಾರ್ವಜನಿಕರು ನೆನಪಿಸಬಹುದಾಗಿದೆ.
Advertisement
Advertisement
ಹಾಸನ ಎಸ್‍ಪಿಯವರ ಫೋನ್ ಇನ್ ಕಾರ್ಯಕ್ರಮದ ಬಗ್ಗೆ ಜನ ಸಾಮಾನ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವೊಮ್ಮೆ ನಾವು ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದಾಗ ಅಲ್ಲಿ ನಮಗೆ ಸರಿಯಾದ ಸ್ಪಂದನೆ ಸಿಗದಿರಬಹುದು ಅಥವಾ ಕೆಲವೊಬ್ಬರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಭಯಪಡಬಹುದು. ಇಂತಹ ಸಮಯದಲ್ಲಿ ನಾವೇ ನೇರವಾಗಿ ಎಸ್‍ಪಿಯವರಿಗೆ ದೂರವಾಣಿ ಕರೆ ಮಾಡಿ ದೂರು ನೀಡಬಹುದಾಗಿದೆ. ಆಗ ಎಸ್‍ಪಿಯವರೇ ಖುದ್ದು ನಮ್ಮ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿ, ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಮಸ್ಯೆ ಬಗೆಹರಿಸಲು ಸೂಚಿಸುತ್ತಾರೆ. ಇದರಿಂದ ಪೊಲೀಸ್ ಇಲಾಖೆಯ ಬಗ್ಗೆ ಜನ ಸಾಮಾನ್ಯರಿಗೆ ಗೌರವ ಹೆಚ್ಚಾಗುತ್ತೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.