ಹಾಸನ: ಶಾಸಕ ಪ್ರೀತಮ್ ಗೌಡ ಅವರು ಈಗ ಪಪ್ಪು ಆಗುತ್ತಾರ ಎಂದು ಹಳೆಯ ಸವಾಲನ್ನು ಮತ್ತೆ ನೆನಪಿಸುವ ಮೂಲಕ ಹಾಸನ ಜಿಲ್ಲೆಯ ನೂತನ ಸಂಸದ ಪ್ರಜ್ವಲ್ ರೇವಣ್ಣ ಟಾಂಗ್ ನೀಡಿದ್ದಾರೆ.
ಬೇಲೂರು ಚನ್ನಕೇಶವನ ದರ್ಶನ ಪಡೆದು ಮಾತನಾಡಿದ ಪ್ರಜ್ವಲ್ ರೇವಣ್ಣ, ಚುನಾವಣೆಗೂ ಮುನ್ನ ಪ್ರಜ್ವಲ್‍ರನ್ನು ಪ್ರೀತಮ್ ಹಾಸನದ ಪಪ್ಪು ಎಂದಿದ್ದರು. ಇದಕ್ಕೆ ಪ್ರಜ್ವಲ್ ಹಾಸನ ಕ್ಷೇತ್ರದಲ್ಲಿ ಲೀಡ್ ಪಡೆದ ನಂತರ ಯಾರು ಪಪ್ಪು ಎನ್ನುವುದು ಹೇಳುತ್ತೇನೆ ಎಂದು ಸವಾಲ್ ಹಾಕಿದ್ದರು. ಅದರಂತೆ ಈಗ ಹಾಸನ ಕ್ಷೇತ್ರದಲ್ಲಿ 15 ಸಾವಿರ ಲೀಡ್ ಪಡೆದಿರುವ ಪ್ರಜ್ವಲ್ ಪ್ರೀತಮ್ ಗೌಡ ಪಪ್ಪು ಎಂದು ಒಪ್ಪಿಕೊಳ್ಳಬೇಕು ಎಂದು ಸವಾಲನ್ನು ನೆನೆಪಿಸಿದ್ದಾರೆ.
ಇದೇ ವೇಳೆ ರಾಜೀನಾಮೆ ಕುರಿತು ಮಾತನಾಡಿದ ಅವರು, ಸಂಸತ್ ಸ್ಥಾನಕ್ಕೆ ರಾಜೀನಾಮೆ ಕೊಡುವ ತೀರ್ಮಾನಕ್ಕೆ ನಾನು ಬದ್ಧ, ರಾಜ್ಯ ಹಾಗೂ ರೈತರ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಹಾಸನದ ಮಾಜಿ ಪ್ರಧಾನಿ ದೇವೇಗೌಡರೂ ಸೋತರೂ ಅವರ ಶಕ್ತಿ ಕುಗ್ಗಿಲ್ಲ. ಅವರ ಶಕ್ತಿ ನಮ್ಮ ಪಕ್ಷದ ಎಲ್ಲರ ಮೇಲಿದೆ. ಅವರ ಆಶೀರ್ವಾದ ಇದ್ದರೆ ನಾವು ಏನು ಬೇಕಾದರೂ ಜಯಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇವೇಗೌಡರಿಗೆ ಕೇಂದ್ರ ಮಟ್ಟದಲ್ಲಿ ಬಹಳ ದೊಡ್ಡ ಗೌರವವಿದೆ ಇದರಿಂದ ರಾಜ್ಯಕ್ಕೆ ಹಲವು ರೀತಿಯ ಅನುದಾನ ತರಲು ಸಹಕಾರಿಯಾಗುತ್ತದೆ. ಹಾಗಾಗಿಯೇ ರಾಜೀನಾಮೆ ವಿಚಾರವನ್ನು ಅವರ ಮುಂದೆ ಇಟ್ಟು ಬಂದಿದ್ದೇನೆ. ನಾನು ಜೂನ್ 4 ರಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ. ಆ ನಂತರ ನಾನು ಹಾಗೂ ಜಿಲ್ಲಾ ನಾಯಕರು ಗೌಡರ ಬಳಿ ಹೋಗಿ ರಾಜೀನಾಮೆ ವಿಚಾರದಲ್ಲಿ ಮತ್ತೆ ಒತ್ತಡ ಹಾಕುತ್ತೇವೆ ಎಂದು ಹೇಳಿದ್ದಾರೆ.
ರಾಜೀನಾಮೆ ಮಾತು ಕೇವಲ ಗಿಮಿಕ್ ಎಂಬ ಎ. ಮಂಜು ಮಾತಿಗೆ ತಿರುಗೇಟು ನೀಡಿದ ಪ್ರಜ್ವಲ್, ಸೋತು ಸುಣ್ಣವಾಗಿರುವವರು ಮನೆಯಲ್ಲಿ ಇರಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಬಾರದು. ಎಲ್ಲಾ ಅಲೆಯ ನಡುವೆ ನಾವು 1.40 ಲಕ್ಷ ಮತದಿಂದ ಗೆದ್ದಿದ್ದೇವೆ ಎಂದರೆ ಜನರು ನಾವು ಮಾಡಿದ ಅಭಿವೃದ್ಧಿ ಮತ್ತು ಸರ್ಕಾರವನ್ನು ಒಪ್ಪಿದ್ದಾರೆ ಎಂದರ್ಥ ಎಂದು ತಿಳಿಸಿದರು.