ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು 42ನೇ ಎಸಿಎಂಎಂ ಕೋರ್ಟ್ 6 ದಿನ ವಿಶೇಷ ತನಿಖಾ ತಂಡದ ಕಸ್ಟಡಿಗೆ ನೀಡಿದೆ.
ವಿಚಾರಣೆ ವೇಳೆ ಎಸ್‍ಐಟಿ 15 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿತ್ತು. ಮಧ್ಯಾಹ್ನದ ನಂತರ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ 6 ದಿನ ಎಸ್‍ಐಟಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿತು. ಇದನ್ನೂ ಓದಿ: ಭವಾನಿ ರೇವಣ್ಣ ಜಾಮೀನು ಅರ್ಜಿ ವಜಾ – ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ
ಪೆನ್ ಡ್ರೈವ್ ಪ್ರಕರಣ ಹೊರಬರುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಅವರು ತಲೆಮರೆಸಿಕೊಂಡು ಬರೋಬ್ಬರಿ 34 ದಿನಗಳ ಬಳಿಕ ಗುರುವಾರ ಬೆಂಗಳೂರಿಗೆ ಆಗಮಿಸಿದ್ದರು. ಜರ್ಮನಿಯ (Germany) ಮ್ಯೂನಿಕ್‍ನಿಂದ ಲುಫ್ತಾನ್ಸಾ ಏರ್ ಲೈನ್ಸ್ ಮೂಲಕ ಶುಕ್ರವಾರ ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದರು. ಬಳಿಕ ಎಸ್‍ಐಟಿ ಕಚೇರಿಗೆ ಪ್ರಜ್ವಲ್ ರೇವಣ್ಣ ಅವರನ್ನು ಅಧಿಕಾರಿಗಳು ಕರೆದೊಯ್ದರು. ಇಂದು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನಂತರ 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಎಸ್‍ಐಟಿ ಪರ ವಕೀಲರ ವಾದವೇನು?:
ಈ ಪ್ರಕರಣ ಸಾಕಷ್ಟು ಗಂಭೀರವಾಗಿದೆ. ಕೊನೆಯ ಉಸಿರಿರೋವರೆಗೂ ಶಿಕ್ಷೆ ಕೊಡಬೇಕಾದ ಪ್ರಕರಣ ಇದಾಗಿದ್ದು, ಪ್ರಜ್ವಲ್ ವಿಕೃತ ಕಾಮಿ ಎಂದರೂ ತಪ್ಪಾಗಲ್ಲ. ಮಹಿಳೆಯರ ಮುಖ ಕಾಣುವಂತೆ ವಿಡಿಯೋ ಮಾಡಿದ್ದಾನೆ. ಇಂತಹ ವ್ಯಕ್ತಿಗೆ ಯಾವ ಮುಲಾಜು ತೋರಿಸಬಾರದು. ಸಾಮಾನ್ಯ ಆರೋಪಿಗಳ ರೀತಿ ನಡೆಸಿಕೊಳ್ಳಬೇಕು. ವಿಸ್ತೃತ ವಿಚಾರಣೆಗಾಗಿ ಈತನನ್ನು 15 ದಿನ ಕಸ್ಟಡಿಗೆ ಕೊಡಿ. ಮೊಬೈಲ್ ಸೇರಿ ಕೆಲ ವಸ್ತುಗಳನ್ನು ವಶಕ್ಕೆ ಪಡೆಯಬೇಕು. ಪ್ರಜ್ವಲ್ ಮತ್ತು ಗೆಳೆಯ ಮಧುಗೆ ಮಾತ್ರ ಮೊಬೈಲ್ ನೋಡಲು ಅವಕಾಶವಿತ್ತು. ಇಬ್ಬರಲ್ಲಿ ಯಾರು ವೀಡಿಯೋ ವೈರಲ್ ಮಾಡಿದ್ದಾರೆ ಗೊತ್ತಾಗಬೇಕು. ಇಷ್ಟು ದಿನ ಯಾವ ದೇಶದಲ್ಲಿದ್ದ.. ಏನ್ ಮಾಡ್ತಿದ್ದ ಅನ್ನೋದು ಗೊತ್ತಾಗಬೇಕು ಎಂದು ಎಸ್‍ಐಟಿ ಪರ ವಕೀಲರು ವಾದಿಸಿದರು.
ಪ್ರಜ್ವಲ್ ಪರ ವಕೀಲರ ವಾದ ಏನು?:
ನನ್ನ ಕಕ್ಷಿದಾರನಿಗೆ ಅವಮಾನ ಮಾಡಬಾರದು. ಇದೇ ಕೇಸ್‍ನಲ್ಲಿ ಎ1 ಆರೋಪಿಗೆ ಜಾಮೀನು ಸಿಕ್ಕಿದೆ. ಎಸ್‍ಐಟಿ ಮುಂದೆ ಪ್ರಜ್ವಲ್ ಬಂದು ಶರಣಾಗಿದ್ದಾರೆ. ಪ್ರಜ್ವಲ್ ಓಡಿ ಹೋಗಲ್ಲ. ಜವಾಬ್ದಾರಿ ಇರೋ ವ್ಯಕ್ತಿ. ಪೊಲೀಸರ ತನಿಖೆಗೆ ಪ್ರಜ್ವಲ್ ಸಹಕಾರ ಕೊಡುತ್ತಾರೆ. ಕೇವಲ ಒಂದು ದಿನ ಪೊಲೀಸ್ ಕಸ್ಟಡಿಗೆ ಕೊಡಿ. ಒಂದು ದಿನದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಬಹುದು ಎಂದು ಪ್ರಜ್ವಲ್ ಪರ ವಕೀಲರ ಕೋರ್ಟ್‍ಗೆ ಮನವಿ ಮಾಡಿದರು.