ಹಾಸನ: ಮೆಕ್ಕಾದಿಂದ ಆಗಮಿಸಿದ್ದ ಹಾಸನ ಮೂಲದ ಮಹಿಳೆಗೆ ಜ್ವರ ಕಾಣಿಸಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಮಹಿಳೆಗೆ ಹಾಸನದ ಹಿಮ್ಸ್ ಆಸ್ಪತ್ರೆಯ ಸ್ಪೆಷಲ್ ವಾರ್ಡ್‍ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇತ್ತೀಚೆಗಷ್ಟೇ ಮಹಿಳೆ ಮೆಕ್ಕಾದಿಂದ ವಾಪಸ್ಸಾಗಿದ್ದರು. ಮೆಕ್ಕಾದಿಂದ ವಾಪಸ್ಸಾದ ನಂತರ ಮಹಿಳೆಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ರು. ಆದರೆ ಜ್ವರ ವಾಸಿಯಾಗದ ಕಾರಣ ಮಂಗಳವಾರ ರಾತ್ರಿ ಮಹಿಳೆ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಹಿಳೆಯ ರಕ್ತ ಮಾದರಿ ಪರೀಕ್ಷೆ ನಡೆಸಲಾಗುತ್ತಿದ್ದು, ಇಂದು ಸಂಜೆ ವೇಳೆಗೆ ವರದಿ ಬರುವ ಸಾಧ್ಯತೆಯಿದೆ.
ಇತ್ತ ಫೆಬ್ರವರಿ 29ರಂದು ಸೌದಿ ಅರೇಬಿಯಾದಿಂದ ಬಂದ 75 ವರ್ಷದ ವೃದ್ಧರೊಬ್ಬರಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಜೀಮ್ಸ್ ಆಸ್ಪತ್ರೆಯಿಂದ ಹೈದರಬಾದ್‍ಗೆ ಶಿಫ್ಟ್ ಮಾಡಲಾಗಿದೆ. ವೃದ್ಧನ ಕುಟುಂಬಸ್ಥರು ಹೈದರಾಬಾದ್‍ಗೆ ಕರೆದೊಯ್ದಿದ್ದಾರೆ.
ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಆದರೆ ವರದಿಗೂ ಮುನ್ನವೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಅವರನ್ನು ಹೈದ್ರಾಬಾದ್‍ಗೆ ಶಿಫ್ಟ್ ಮಾಡಿದ್ದಾರೆ. ಈಗಾಗಲೇ ಕುಟುಂಬಸ್ಥರನ್ನು ಕೂಡ ತಪಾಸಣೆ ಮಾಡಿರುವ ವೈದ್ಯರು, ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.