ಹಾಸನ: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯ ಮೇಲೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ.
ನಗರದ ಕಾಟೀಹಳ್ಳಿ ಮಧು (32) ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿಗಳಾದ ಹಾಸನದ ವಲ್ಲಾಭಾಯಿ ರಸ್ತೆಯ ಲೋಕೇಶ (38), ದಿಲೀಪ (27) ಹಾಗೂ ಮದನ (35) ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಕಳೆದ 8 ದಿನಗಳ ಹಿಂದೆ ಮಧು ಎಂಬಾತನ ಶವ ನಗರದ ಸಂತೆಪೇಟೆ ಬಳಿ ಪತ್ತೆಯಾಗಿತ್ತು. ಈ ಕುರಿತು ಸ್ಥಳಿಯರಿಂದ ಮಾಹಿತಿ ಪಡೆದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಪೊಲೀಸರು ಮೃತ ಮಧು ಫೋನ್ ನ ಕಾಲ್ ಲಿಸ್ಟ್ ಪರಿಶೀಲನೆ ನಡೆಸಿ ವೇಳೆ ಕೊನೆಯ ಕರೆ ಆರೋಪಿ ಲೋಕೇಶ್ ನಿಂದ ಬಂದಿತ್ತು. ಬಳಿಕ ಅನುಮಾನದ ಮೇಲೆ ಲೋಕೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.
ಕೊಲೆ ಮಾಡಿದ್ದು ಯಾಕೆ?
ಆರೋಪಿ ಲೋಕೇಶ್ ಅತ್ಯಾಚಾರ ಪ್ರಕರಣವೊಂದರಲ್ಲಿ 7 ವರ್ಷ ಜೈಲು ಶಿಕ್ಷೆ ಅನುಭವಿಸಿ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ. ಬಿಡುಗಡೆಯಾದ ನಂತರ ತನ್ನ ಪತ್ನಿಗೆ ಮಧು ನಿರಂತರವಾಗಿ ಕರೆ ಮಾಡುತ್ತಿದ್ದ ವಿಚಾರ ಗೊತ್ತಾಗಿದೆ. ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದರಿಂದಲೇ ಮಧು ಕರೆ ಮಾಡುತ್ತಿದ್ದಾನೆ ಎನ್ನುವ ಅನುಮಾನ ಲೋಕೇಶನಿಗೆ ಬಂದಿದೆ. ಹೀಗಾಗಿ ಸ್ನೇಹಿತರ ಜೊತೆಗೂಡಿ ಮಧು ತಲೆ ಮೇಲೆ ಬಿಯರ್ ಬಾಟಲ್ ನಿಂದ ಹೊಡೆದು, ಬಳಿಕ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ಸದ್ಯ ಆರೋಪಿಗಳನ್ನು ಬಂಧಿಸಿರುವ ಹಾಸನ ನಗರ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.