ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ 6 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಹೀನಾ ಕೌಸರ್- ಸುಹೀಲ್ ಅಹಮದ್ ಎಂಬವರ ದಾಂಪತ್ಯ ಕಲಹ ಈಗ ಬೀದಿಗೆ ಬಂದಿದೆ.
ಪತಿ ಸುಹೀಲ್, ದುಶ್ಚಟಗಳ ದಾಸನಾಗಿ ಮದುವೆಯಾದ ಒಂದೇ ವರ್ಷಕ್ಕೆ ಕಾಟ ಕೊಡಲು ಶುರುಮಾಡಿದ್ದಾನೆ. ಅಲ್ಲದೇ ಎರಡನೇ ಮದುವೆಯಾಗಿದ್ದಾನೆ. ಹಾಗಾಗಿ ವಿಚ್ಛೇದನ ಬೇಕು ಎಂದು ಪತ್ನಿ ಹೀನಾ ಆರೋಪಿಸಿ ಆತನ ಮನೆಯೆದುರು ಆಕ್ರೋಶ ಹೊರಹಾಕಿದ್ದಾಳೆ. ಆದ್ರೆ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಹೀನಾ ಕೌಸರ್, ಗಂಡನ ಮನೆ ಎದುರು ಗದ್ದಲ ಮಾಡಿದ್ದಾಳೆ ಎಂದು ಆರೋಪಿಸಿ ಆಕೆಯ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಪತಿಯ ಪರ ವಕೀಲರು ನಿರ್ಧರಿಸಿದ್ದಾರೆ.
ನನ್ನ ಹಾಗೂ 5 ವರ್ಷದ ಮಗನಿಗೆ ಜೀವನಾಂಶ ಕೊಡಬೇಕು. ಮದುವೆ ವೇಳೆ ವರದಕ್ಷಿಣೆ ರೂಪದಲ್ಲಿ ನೀಡಿರುವ ಬೆಲೆಬಾಳುವ ವಸ್ತುಗಳನ್ನು ವಾಪಸ್ ಕೊಡಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಕಳೆದ ಜನವರಿ 2 ರಂದು ಸುಹೀಲ್ ಮನೆ ಎದುರು ರಂಪಾಟ ಮಾಡಿದ್ದಳು. ಮಹಿಳಾ ಪೊಲೀಸರ ಜೊತೆಗೆ ತೆರಳಿ ಗಂಡನ ಮನೆ ಬಾಗಿಲ ಎದುರು ಕಣ್ಣೀರಿಟ್ಟು ಆಕ್ರೋಶ ಹೊರ ಹಾಕಿದ್ದಾಳೆ.
ಹೀನಾ ಕೌಸರ್ ಈ ರಂಪಾಟವೇ ಆಕೆಗೆ ಮುಳುವಾಗುವ ಸನ್ನಿವೇಶ ಎದುರಾಗಿದೆ. ಗಂಡನಿಂದ ನನಗೆ ಜೀವನಾಂಶ ಬೇಕು ಎಂದು ಸಕಲೇಶಪುರ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಕೌಸರ್, ಹಾಸನದ ಕೋರ್ಟ್ ನಲ್ಲೂ ವರದಕ್ಷಿಣೆ ದೌರ್ಜನ್ಯ ಕೇಸು ದಾಖಲಿಸಿದ್ದಾಳೆ. ಮತ್ತೊಂದೆಡೆ ನನಗೆ ನ್ಯಾಯ ಬೇಕು ಅಂತ ಪತಿ ಸುಹೀಲ್ ಅಹಮದ್ ಕೂಡ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರತ್ಯೇಕ ದೂರು ನೀಡಿದ್ದಾರೆ. ಈ ಎಲ್ಲಾ ಪ್ರಕರಣಗಳು ವಿಚಾರಣೆ ಹಂತದಲ್ಲಿರುವಾಗಲೇ, ಹೀನಾ ಕೌಸರ್ ಪೊಲೀಸ್ ದುರ್ಬಳಕೆ ಮಾಡಿಕೊಂಡು ದುರ್ವರ್ತನೆ ತೋರಿದ್ದಾಳೆ. ಅವಾಚ್ಯ ಶಬ್ಧಗಳ ಪದ ಬಳಕೆ ಮಾಡಿದ್ದಾಳೆ. ಇದೂ ಒಂದು ರೀತಿಯ ಅಕ್ರಮ ನಡೆ ಎಂದು ಆರೋಪಿಸಿ ಪತಿಯ ಪರ ವಕೀಲರು ಹೊಸದಾಗಿ ದೂರು ನೀಡಲು ಮುಂದಾಗಿದ್ದಾರೆ. ಹೀಗಾಗಿ ದುಡುಕಿನ ನಡೆಯೇ ಹೀನಾ ಕೌಸರ್‍ಗೆ ಈಗ ಮುಳುವಾಗುತ್ತಿದೆ ಎಂದು ಸುಹೀಲ್ ಪರ ವಕೀಲೆ ಭಾನು ಮುಸ್ತಾಕ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv